ಚಿತ್ರದುರ್ಗ: ಶೋಷಿತ ಸಮುದಾಯಗಳಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಿದ್ದ ಬಸವಾದಿ ಶಿವಶರಣರು ಸಮಾಜ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಅಖಿಲ ಕರ್ನಾಟಕ ಶ್ರೀ ಗುರುಮೇದಾರ ಕೇತೇಶ್ವರ ಟ್ರಸ್ಟ್‌ನಿಂದ ಮೇದಾರ ಕೇತೇಶ್ವರ ಗುರು ಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಕೇತೇಶ್ವರ ಜಯಂತಿ, ಮೇದಾರ ಸಂಸ್ಕೃತಿ ವೈಭವ ಹಾಗೂ ಲಿಂ. ಶ್ರೀ ಹನುಮಂತಯ್ಯ ಕೇತೇಶ್ವರ ಸ್ವಾಮೀಜಿ ಅವರ 36ನೇ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತಳ ಸಮುದಾಯದ ಬದುಕು ಹಸನಗೊಳಿಸಲು ಶರಣರು ಪ್ರಯತ್ನಿಸಿದ್ದರು. ಈ ಸಮುದಾಯದ ಜನರು ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಶೋಷಿತ ವರ್ಗಗಳಿಗೆ ಸ್ವಾಭಿಮಾನದಿಂದ ಬದುಕುವಂತೆ ಶರಣರು ಉಪದೇಶಿಸಿದ್ದಾರೆ. ಮಕ್ಕಳಿಗೆ ಶಿಕ್ಷಣ ಕಲಿಸಿ ಮುಖ್ಯ ವಾಹಿನಿಗೆ ಮರಳಬೇಕು ಎಂದರು.
ಶ್ರೀ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಮಾತನಾಡಿ, ಈ ಹಿಂದಿನ ಶ್ರೀಗಳ ಮಾರ್ಗದರ್ಶನದಲ್ಲಿ ಸಾಗಲಾಗುವುದು. ಸಮಾಜದ ಮುಖಂಡರು, ಭಕ್ತರು ಕಾಲ, ಕಾಲಕ್ಕೆ ಮಠಕ್ಕೆ ಆಗಮಿಸಿ ಸಲಹೆ ಸಹಕಾರ ನೀಡಬೇಕೆಂದರು.
ಟ್ರಸ್ಟ್ ಅಧ್ಯಕ್ಷ ಸಿ. ಪಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮತ್ತಿತರ ಮಠಾಧೀಶರು,ಸಮುದಾಯದ ಪ್ರಮುಖರು ಇದ್ದರು.