ಜಿಲ್ಲೆ

ಸಮಾಜ ಸುಧಾರಣೆಗೆ ವಿದ್ಯೆ ದಿವ್ಯಾಸ್ತ್ರ

ಬೀದರ್: ವಿದ್ಯೆ ದಿವ್ಯಾಸ್ತ್ರ. ಇದರಿಂದ ವ್ಯವಸ್ಥೆ ಸುಧಾರಿಸಿ ಸೌಹಾರ್ದ ಸಮಾಜ ನಿರ್ಮಿಸಬಹುದು ಎಂದು ಹೈಕೋಟ್೯ ನ್ಯಾಯಾಧೀಶ ಎನ್.ಎಸ್. ಸಂಜಯ ಗೌಡರು ಹೇಳಿದರು.

ನಗರದ ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಎನ್.ಕೆ.ಜಾಬಶೆಟ್ಟಿ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿನಿಯರ ನೂತನ ವಸತಿ ಗೃಹ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಗುರಿ ಮುಟ್ಟಲು ಸಾಧ್ಯ. ವೈದ್ಯರೆಂದರೆ ಕಣ್ಣಿಗೆ ಕಾಣುವ ದೇವರು. ರೋಗಿಗಳನ್ನು ಕರುಣೆಯಿಂದ ಕಂಡು ಧನ್ಯತೆ ಪಡೆಯಬೇಕು ಎಂದರು.

ಪಶು ವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಸಿ. ವೀರಣ್ಣ ಮಾತನಾಡಿ, ವ್ಯಕ್ತಿತ್ವ ವಿಕಾಸವೇ ಶಿಕ್ಷಣದ ಮೂಲ ಉದ್ದೇಶ. ಆದರೆ ಪ್ರಸ್ತುತ ವ್ಯಾಪಾರೀಕರಣ ಆಗಿದೆ. ಶಿಕ್ಷಣವನ್ನು ಉದ್ಯಮವಾಗಿ ಮಾಡಿ ಆದಾಯದ ಕ್ಷೇತ್ರವಾಗಿ ಮಾರ್ಪಡಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಮನುಷ್ಯ ಆರೋಗ್ಯವಾಗಿರಲು ಆಸ್ಪತ್ರೆಗಳು ತಲೆಯೆತ್ತಿವೆ. ಆದರೆ ರೋಗ ಬರುವುದೇಕೆ ಎಂಬುದನ್ನು ಯಾರೂ ವಿಚಾರ ಮಾಡುತ್ತಿಲ್ಲ. ಆರೋಗ್ಯ ಸರಿಯಾಗಿ ಇಟ್ಟಿಕೊಳ್ಳಬೇಕು ಎಂದು ಉಪದೇಶಿಸಿದರು.

ಡಾ.ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಚೇಗರಡ್ಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕಕುಮಾರ ಮಾನೂರೆ, ಪ್ರಮುಖರಾದ ಬಿ.ಜಿ. ಶೆಟಕಾರ, ಶಿವಶರಣಪ್ಪ ಸಾವಳಗಿ, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶೆಟ್ಟಿ, ಶರಣಪ್ಪ ತಿರ್ಲಾಪುರೆ, ಡಾ.ಹಾವಗಿರಾವ ಮೈಲಾರೆ, ಅನೀಲಕುಮಾರ ಔರಾದೆ, ಸಹಜಾನಂದ ಕಂದಗೂಳ, ಕಲ್ಯಾಣರಾವ ಬುಜುರಕೆ ಇದ್ದರು. ಪ್ರಾಚಾರ್ಯ ಡಾ.ಶ್ರೀದೇವಿ ಸ್ವಾಮಿ ಸ್ವಾಗತಿಸಿದರು. ಡಾ.ವಿಜಯಕುಮಾರ ಬಿರಾದಾರ್ ನಿರೂಪಣೆ ಮಾಡಿದರು. ಡಾ.ಅಶ್ವಿನ್ ಕುಮಾರ್ ವಂದಿಸಿದರು.