ಬಸವಕಲ್ಯಾಣ: ವ್ಯಸನಮುಕ್ತ ಸಮಾಜಕ್ಕಾಗಿ ಜನಜಾಗೃತಿ ಅಭಿಯಾನ ನಡೆಸಿರುವುದನ್ನು ಪರಿಗಣಿಸಿ ಬಳ್ಳಾರಿಯ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನನಗೆ ಮಾತ್ರವಲ್ಲ, ನಮ್ಮ ಇಡೀ ಭಕ್ತ ಸಮೂಹಕ್ಕೆ ಸಂದ ಗೌರವ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನುಡಿದರು.
ಸಂಸ್ಥಾನ ಗವಿಮಠ ಟ್ರಸ್ಟ್ ಹಾಗೂ ಸಮಸ್ತ ಸದ್ಭಕ್ತರಿಂದ ಭಾನುವಾರ ಗವಿಮಠದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ವ್ಯಸನಮುಕ್ತ ಸಮಾಜದ ಸಂಕಲ್ಪದೊಂದಿಗೆ ನಮ್ಮ ಜನ್ಮದಿನೋತ್ಸವ ನಿಮಿತ್ತ ಮರ ಬೆಳೆಸಿ ಪರಿಸರ ಉಳಿಸಿ, ದುಶ್ಚಟ ಜೋಳಿಗೆ, ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಪ್ಲಾಸ್ಟಿಕ್‌ಮುಕ್ತ ಜೀವನ ಹೀಗೆ ಪ್ರತಿವರ್ಷ ಒಂದೊಂದು ಸಾಮಾಜಿಕ ಸಂದೇಶದೊಂದಿಗೆ ನಗರದ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಸಮಾಜ ಸುಧಾರಣೆ ಕಾರ್ಯ ಕೈಗೊಳ್ಳುತ್ತಿದ್ದೇವೆ. ಇವುಗಳಿಗೆಲ್ಲ ಭಕ್ತರೇ ಪ್ರೇರಣೆ ಎಂದು ಸಾರ್ಥಕ್ಯಭಾವ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಮಾತನಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿ ಶರಣಬಸಪ್ಪ ಅಲಗುಡೆ ಪ್ರಾರ್ಥನಾಗೀತೆ, ಪ್ರೊ.ರುದ್ರೇಶ್ವರ ಗೋರ್ಟಾ ಭಕ್ತಿಗೀತೆ ಹಾಡಿದರು. ಮುಖ್ಯ ಶಿಕ್ಷಕ ರಮೇಶ ರಾಜೋಳೆ ಸಂಚಾಲನೆ ಮಾಡಿದರು.
ಶಿಕ್ಷಕ ಮಲ್ಲಿಕಾರ್ಜುನ ಅಲಗುಡೆ ಮಾತನಾಡಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ಅಭಿನವ ಪೂಜ್ಯರೇ ಸಾಕ್ಷಿ. ಇಂಥ ದಾರ್ಶನಿಕರನ್ನು ಪಡೆದ ನಾವೆಲ್ಲರೂ ಭಾಗ್ಯವಂತರು ಎಂದು ಅಭಿನಂದನಾ ನುಡಿಗಳನ್ನಾಡಿದರು.
ಸಂಪನ್ಮೂಲ ಶಿಕ್ಷಕ ಚನ್ನವೀರ ಜಮಾದಾರ ಅನಿಸಿಕೆ ವ್ಯಕ್ತಪಡಿಸುತ್ತ ಡಾ.ಅಭಿನವ ಗುರುಗಳು ಸರಳ, ಸಜ್ಜನಿಕೆ ಸಾಕಾರಮೂರ್ತಿ. ಯಾರೇ ಕರೆದರೂ ಬರುವ ಸಾಮಾನ್ಯರು. ಇಂಥವರಿಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ದೊರೆತಿದ್ದು ಸಾಧನೆಗೆ ಸಂದ ಗೌರವ ಎಂದರು.
ಬಿಡಿವಿಸಿ ಸದಸ್ಯ ಸೋಮಶೇಖರ ವಸ್ತ್ರದ ಮಾತನಾಡಿ, ಘಟವನ್ನು ಮಠ ಮಾಡಿದ ಶ್ರೀ ಡಾ.ಅಭಿನವ ಗುರುಗಳ ಸಾಧನೆಯನ್ನು ಕೊಂಡಾಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರೊ.ಶಾಂತಲಿಂಗ ಮಠಪತಿ, ಪ್ರಾಚಾರ್ಯ ಎ.ಜಿ. ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ಲಕ್ಷ್ಮಣ ಸಿಂಗಾರೆ, ರಾಮಚಂದ್ರ ಹುಡುಗೆ, ಮಲ್ಲಿಕಾರ್ಜುನ ಅಲಶೆಟ್ಟಿ, ಪಂಚಾಕ್ಷರಿ ಹಿರೇಮಠ, ರೇವಣಸಿದ್ದಯ್ಯ ಮಠಪತಿ, ಬರಹಗಾರ ವೀರಶೆಟ್ಟಿ ಪಾಟೀಲ, ಡಾ.ವಿ.ಎಸ್. ರಾಜೋಳೆ, ಪ್ರೊ.ಸಂತೋಷ ಮಹಾಜನ್, ರಾಕೇಶ ಪುರವಂತ, ರವಿ ಬಿರಾದಾರ, ಗೋವಿಂದರೆಡ್ಡಿ ಕೊತಾಪಲ್ಲೆ, ಸರೋಜನಿ ಹಿರೇಮಠ, ರೇಖಾ ಚಿಟ್ಟೆ, ಮಹಾನಂದಾ ಪುರವಂತ, ಜ್ಯೋತಿ ಪುರವಂತ ಇತರರಿದ್ದರು.