ಹಾಸನ: ಸಮಾಜಶಾಸ್ತ್ರಜ್ಞರು ಸಂವೇದನಶೀಲರಾಗಿ ದಮನಿತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಅಲೆಮಾರಿ, ಬುಡಕಟ್ಟು ಮತ್ತಿರರೂ ವ್ಯವಸ್ಥೆಯ ಪ್ರಮುಖ ಭಾಗ ಎನ್ನುವುದನ್ನು ತಿಳಿಸುವ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊ. ಎಂ. ಗುರುಲಿಂಗಯ್ಯ ಹೇಳಿದರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಪರಿವರ್ತನಾ ಫೋರಂ ವತಿಯಿಂದ ಬುಧವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವು ಸಮಾಜಶಾಸ್ತ್ರದ ಪ್ರಯೋಗಾಲಯವಿದ್ದಂತೆ, ಸಮಾಜ ಶಾಸ್ತ್ರ ಅಭ್ಯಸಿಸುವವನನ್ನು ಸಮಾಜವಿಜ್ಞಾನಿಯಾಗಿ ಕಾಣುವ ಅವಶ್ಯಕತೆಯಿದೆ. ಸಮಾಜದ ಕಟ್ಟಕಡೆಯ ವ್ಯಕಿಯನ್ನೂ ತಲುಪಲು ಸಾಧ್ಯವಿರುವುದು ಸಮಾಜಶಾಸ್ತ್ರದ ಹಿರಿಮೆ. ವ್ಯವಸ್ಥೆಗಳು ಸೋಲುತ್ತಿರುವ ಹೊತ್ತಲ್ಲಿ ಶಿಕ್ಷಣ ಒಂದೇ ಭರವಸೆ, ಸಮಾಜಶಾಸ್ತ್ರದ ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಡೀನ್ ಎಂ.ಬಿ. ಇರ್ಷಾದ್ ಮಾತನಾಡಿ, ಸಮಾಜದ ಪರಿವರ್ತನೆಗಾಗಿ ದುಡಿದ ಬುದ್ಧ, ಬಸವ, ಮಹಾವೀರ ಇವರೆಲ್ಲರೂ ಸಮಾಜಶಾಸ್ತ್ರಜ್ಞರೇ, ಇವರೆಲ್ಲರೂ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ತಾಯಿಯೂ ಜಗತ್ತಿನ ಅತ್ಯುತ್ತಮ ಸಮಾಜಶಾಸ್ತ್ರಜ್ಞಳು. ಎಲ್ಲಾ ಶಾಸ್ತ್ರಗಳ ಮೂಲಬೇರು ಸಮಾಜಶಾಸ್ತ್ರ. ಸಮಾಜವನ್ನು ನಿರ್ವಹಿಸುವ, ಪರಿವರ್ತಿನೆಯೆಡೆಗೆ ಕೊಂಡೊಯ್ಯುವ ಶಕ್ತಿ ಸಮಾಜಶಾಸ್ತ್ರಕ್ಕಿದೆ. ವಿದ್ಯಾರ್ಥಿಗಳು ಪ್ರತೀಕ್ಷಣವೂ ಅಪ್‌ಡೇಟ್ ಆಗುವ ಮುಖಾಂತರ ಪರಿವರ್ತನೆಗಾಗಿ ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು ಅಧ್ಯಕ್ಷೀಯ ಮಾತುಗಳನ್ನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ದೃಢ ಮನಸ್ಸಿನಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಸಾಧಕರನ್ನು ನೋಡಿ ಅವರಂತೆಯೇ ಆದರ್ಶ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಶ್ರೀಧರ್, ಗಗನ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪರೀಕ್ಷಾ ನಿಯಂತ್ರಕ ಕೆ.ಡಿ. ಮುರಳೀಧರ್, ಸಮಾಜ ಶಾಸ್ತ್ರ ವಿಭಾಗದ ಡಾ. ಎನ್. ವೆಂಕಟನರಸಯ್ಯ, ಡಾ. ವನಿತಾ ಡಿ., ಡಾ. ಸುರೇಶ್.ಸಿ ಇತರರು ಇದ್ದರು