ಜಿಲ್ಲೆ

ಸಮಾಜ ಪರಿವರ್ತನೆಯಲ್ಲಿ ಕಲೆಗಳ ಪಾತ್ರ ಮುಖ್ಯ, ಪವಾಡ ಶ್ರೀಬಸವಣ್ಣದೇವರ ಮಠದಲ್ಲಿ ನಾಟಕೋತ್ಸವ

ನೆಲಮಂಗಲ: ಕಲೆ ಮನರಂಜನೆ ಜತೆಗೆ ಸಮಾಜದ ಪರಿವರ್ತನೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು ಹೇಳಿದರು.

ನಗರದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಮಂಗಳವಾರ ಸಾಣೆಹಳ್ಳಿ ಮಠದ ಶಿವಸಂಚಾರ ಕಲಾ ತಂಡ ಆಯೋಜಿಸಿದ್ದ 3 ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ಕಲಾ ಪ್ರಕಾರಗಳಿಗೆ ದೊಡ್ಡ ಇತಿಹಾಸವಿದೆ. ಅದರಲ್ಲೂ ರಂಗಭೂಮಿ ಕಲೆಗೆ ಆಕರ್ಷಿತರಾಗಿರುವ ನಾಡಿನ ಜನತೆ ರಂಗಕಲೆಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿದ್ದ ಬಸವಣ್ಣದೇವರ ಮಠ ಇದೇ ಮೊದಲ ಬಾರಿಗೆ ನಾಟಕೋತ್ಸವ ಏರ್ಪಡಿಸಿ ಕಲೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಮುಂದಾಗಿರುವುದು ಪ್ರಶಂಸನೀಯ ಎಂದರು.

ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ದೇಶೀಯ ಕಲೆಗಳು ಸನಾತನ ಧರ್ಮದ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುತ್ತಿವೆ. ಪ್ರದರ್ಶನ ಕಲೆಗಳಿಂದ ಜನಸಾಮಾನ್ಯರಿಗೂ ಧರ್ಮದ ಅರಿವು, ನೈತಿಕ ಮೌಲ್ಯ ತಿಳಿಸುವ ಕೆಲಸವಾಗುತ್ತಿದೆ. ಆದರೆ ಆಧುನಿಕ ಕಾಲದಲ್ಲಿ ಕಲೆಗಳ ಮೂಲ ಉದ್ದೇಶ ಕಳೆದುಕೊಂಡು ಕೇವಲ ಮನರಂಜನೆಗೆ ಸೀಮಿತವಾಗಿರುವುದು ಬೇಸರದ ಸಂಗತಿ ಎಂದರು.

ಮಂಗಳವಾರ ರಾತ್ರಿ ಚಂದ್ರಶೇಖರ್ ತಾಳ್ಯ ರಚಿಸಿರುವ ಛಾಯಾಭಾರ್ಗವಿ ನಿರ್ದೇಶನದ, ಆರ್. ಜಗದೀಶ್ ಸಂಗೀತ ನೀಡಿರುವ ಒಕ್ಕಲಿಗ ಮುದ್ದಣ್ಣ ಎಂಬ ಐತಿಹಾಸಿಕ ನಾಟಕವನ್ನು ಸಾಣೆಹಳ್ಳಿ ಶಿವಸಂಚಾರ ಕಲಾವಿದರ ಪ್ರದರ್ಶಿಸಿದರು.

ಬುಧವಾರ ರಾತ್ರಿ ಲಿಂಗದೇವರು ಹಳೆಮನೆ ರಚಿಸಿರುವ, ಆರ್.ಜಗದೀಶ್ ನಿರ್ದೇಶಿಸಿ, ಸಂಗೀತ ನೀಡಿರುವ ಗಡಿಯಂಕ ಕುಡಿಮುದ್ದ ನಾಟಕ ಪ್ರದರ್ಶಿಸಿದರು.

31ರಂದು ಬಿ.ಆರ್. ಅರಿಷಣಗೂಡಿ ರಚಿಸಿರುವ ವೈ.ಡಿ. ಬಾದಾಮಿ ಸಾಣೇಹಳ್ಳಿ ನಿರ್ದೇಶಿಸಿರುವ ಬಸ್ ಕಂಡಕ್ಟರ್ ಎಂಬ ನಾಟಕ ಪ್ರದರ್ಶನ ಮಾಡಲಿದ್ದಾರೆ.

ನಿವೃತ್ತ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಕಲಾವಿದರ ಬಳಗದ ಅಧ್ಯಕ್ಷ ಜಿ.ಗಂಗರಾಜು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ರಾಜಮ್ಮಪ್ರಕಾಶ್, ಪಿಯು ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಮಹಾಲಿಂಗಪ್ಪ ವಿ. ನೆಗಳೂರ್, ಕಲಾವಿದರಾದ ಬೂದಿಹಾಳ್ ಕಿಟ್ಟಿ, ರಂಗನಾಥ್, ದಿನೇಶ್ ಚಿಕ್ಕಮಾರನಹಳ್ಳಿ, ಮುಖಂಡ ತ್ಯಾ.ರಾ.ಮುನಿರಾಜು, ವಕೀಲ ಯಲ್ಲಪ್ಪ ಮತ್ತಿತರರಿದ್ದರು.