ಬಾಗಲಕೋಟೆ: ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎನ್ನುವುದು ಸೇರಿ ಅನೇಕ ಕೆಲಸಗಳನ್ನು ಮಾಡಿದ್ದರೂ ನನ್ನೇಕೆ ದ್ವೇಷಿಸುತ್ತಿರಿ ಎಂದು ಲಿಂಗಾಯತರಿಗೆ ಇತ್ತೀಚಿಗೆ ಜಿಲ್ಲೆಗೆ ಬಂದಿದ್ದ ವೇಳೆ ಪ್ರಶ್ನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ವೀರಣ್ಣ ಚರಂತಿಮಠ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚರಂತಿಮಠ, ಬಸವಣ್ಣನವರನ್ನು ಸಾಂಸ್ಕೃತಿ ನಾಯಕ ಎಂದು ಘೋಷಣೆ ಮಾಡಿರುವುದು ದೊಡ್ಡ ಸಾಧನೆ ಏನಲ್ಲ. ಅವರನ್ನು ಮಹಾತ್ಮ ಬಸವಣ್ಣ ಎಂದು ಕರೆಯುತ್ತೇವೆ. ಅವರು ಸಮಾನತೆಯ ಹರಿಕಾರರು ಎಂದರು.
ಸಿದ್ದರಾಮಯ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದು ನಿಜ. ಆದರೆ, ಅದರ ಹಿಂದಿನ ಉದ್ದೇಶ ಹಾಗೂ ಆ ಉದ್ಧೇಶದ ಮನಸ್ಥಿತಿ ಏನಿದೆ ಅದನ್ನು ವಿರೋಽಸುತ್ತೇವೆ ವಿನಃ ನೀವು ಮಾಡಿದ ಕೆಲಸದ ವ್ಯವಸ್ಥೆಯನ್ನು ನಾವು ವಿರೋಽಸುತ್ತಿಲ್ಲ ಎಂದರು.
೨೦೧೩ರಿಂದ ೨೦೧೮ರ ವರೆಗೂ ಇವರ ಮನಸ್ಥಿತಿ ಏನಾಗಿತ್ತು? ವೀರಶೈವ ಬೇರೆ ಲಿಂಗಾಯತ ಬೇರೆ ಎಂದು ಸಮಾಜ ಒಡೆಯಲು ಮುಂದಾದರು. ಇವರಿಗೆ ಸಮಾಜ ಒಡೆಯಲು ಸಿಗುವುದು ನಾವು ಅಷ್ಟೆ. ಒಕ್ಕಲಿಗರು ಸಿಗುವುದಿಲ್ಲ. ಅಲ್ಲಿ ಕೆಲವೇ ಪಂಗಡಗಳು ಇವೆ. ಮತ್ತು ಅವರಲ್ಲಿ ಲೀಡರ್‌ಗಳು ತುಂಬ ಭದ್ರವಾಗಿದ್ದಾರೆ ಎಂದು ಹೇಳಿದರು.
ವೀರಶೈವ ಲಿಂಗಾಯತರಲ್ಲಿ ಎಷ್ಟೊಂದು ಒಳಪಂಗಡಗಳು ಇವೆ ಎಂದು ಗೊತ್ತಾಗಿದ್ದೆ ದೇವರಾಜ ಅರಸು ಕಾಲದಲ್ಲಿ. ಅವರು ಯಾವುದೇ ವಿಚಾರ ಮಾಡದೇ ತರಾತುರಿಯಲ್ಲಿ ಹಾವನೂರ ಆಯೋಗ ಮಾಡಿದಾಗಿನಿಂದ ಇದು ಶುರುವಾಗಿದ್ದು, ಇವತ್ತಿಗೂ ನಿಂತಿಲ್ಲ. ಕೆಲವರು ಮೀಸಲಾತಿ ಸೌಲಭ್ಯಕ್ಕಾಗಿ ತಮ್ಮ ಮನಸ್ಥಿತಿ ಬದಲಾಯಿಸಿಕೊಂಡಿದ್ದರೂ ವೀರಶೈವ ಲಿಂಗಾಯತ ಜೀನ್ಸ್ ಎಂದು ಏನಿದೆ ಅದು ಇದ್ದೆ ಇರುತ್ತದೆ. ಭಾರತದಲ್ಲಿ ಇರುವವರಿಗೆ ಹೇಗೆ ಹಿಂದು ಎನ್ನುವ ಜೀನ್ಸ್ ಇದೆ, ಹಾಗೆಯೇ ನಮ್ಮಲ್ಲಿ ಲಿಂಗಾಯತ ಎನ್ನುವ ಜೀನ್ಸ್ ಇದ್ದೆ ಇದೆ. ಸಾಂಸ್ಕೃತಿಕವಾಗಿ ನಾವು ಒಂದೇ ಇದ್ದೇವೆ. ಉದ್ಯೋಗದ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳು ಬಂದಿವೆ ಅಷ್ಟೆ ಎಂದರು.
ಸಮಾಜವನ್ನು ಒಡೆಯಲು ಯಾರೆಲ್ಲ ಪ್ರಯತ್ನ ಮಾಡಿದ್ದಾರೋ ಅವರಿಗಾರಿಗೂ ಒಳ್ಳೆಯದು ಆಗಿಲ್ಲ. ದೇವರಾಜ ಅರಸು ಅವರ ಪರಿಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತೆ ಇದೆ. ಇವರ(ಸಿದ್ದರಾಮಯ್ಯ) ಮನಸ್ಥಿತಿ ನಮಗೆ ಒಳ್ಳೆಯದು ಮಾಡಬೇಕೆಂಬುವುದು ಇಲ್ಲ. ಅದನ್ನು(ಬಸವಣ್ಣ ಸಾಂಸ್ಕೃತಿಕ ನಾಯಕ) ನೆಪ ಮಾಡಿಕೊಂಡು ಇವರನ್ನು ಒಡೆಯಬೇಕೆಂದು ಹೊರಟಿದ್ದಾರೆ. ಕಾರಣ ಒಡೆಯಲು ಸರಳವಾಗಿ ಸಿಗುವವರು ನಾವು ಮಾತ್ರ. ಇದರಲ್ಲಿ ಅವರು ಎಷ್ಟು ಯಶಸ್ವಿ ಆಗುತ್ತಾರೋ ಆಗುವುದಿಲ್ಲವೋ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ರಾಜ್ಯದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡುವ ಸ್ಟೇಜ್ ಈಗ ಉಳಿದಿಲ್ಲ. ದೇಶದಲ್ಲಿ ಮಾತ್ರವಲ್ಲದೇ ಹೊರದೇಶಗಳಲ್ಲೂ ಸಂಘದ ಚಟುವಟಿಕೆಗಳು ನಡೆದಿವೆ. ಕೆಲವರು ಬಾಯಿ ಚಪಲಕ್ಕೆ ಏನೇನೋ ಮಾತನಾಡುತ್ತಾರೆ. ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆ. ಅನೇಕ ಅಂಗ ಸಂಸ್ಥೆಗಳು ಇವೆ. ಬಿಜೆಪಿಯೂ ಅದರಲ್ಲಿ ಒಂದು ಎಂದರೆ ತಪ್ಪಾಗಲ್ಲ ಎಂದರು.
ತಮ್ಮ ಹುಳುಕು ಹಾಗೂ ಗೊಂದಲಗಳನ್ನು ಮುಚ್ಚಿಕೊಳ್ಳಲು, ದೇಶದಲ್ಲಿ ಇರುವ ಅನಕ್ಷರಸ್ಥ ಜನರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ವೋಟ್ ಚೋರಿ ಎನ್ನುತ್ತಾರೆ. ೬೦ ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ ಚೋರ್ ಮಾಡಿಯೇ ಅಽಕಾರಕ್ಕೆ ಬಂದಿದ್ದರಾ? ರಾಹುಲ್ ಗಾಂಽ ಏನೇನು ಹೇಳಿದ್ದಾರೋ ಅದೆಲ್ಲವೋ ಪ್ಲಾಪ್ ಆಗಿವೆ. ಅವರಿಂದ ವಿಪಕ್ಷ ನಾಯಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಗೌರವ ತಂದಿದ್ದಾರೆ. ಅಂತ ರಾಹುಲ್ ಗಾಂಽ ಮೆಚ್ಚಿಸಲು, ಹೈಕಮಾಂಡ್‌ನಲ್ಲಿ ತಮ್ಮ ಸಚಿವ ಸ್ಥಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಲು ಕಾಂಗ್ರೆಸ್‌ನಲ್ಲಿ ಕೆಲವರು ಪೈಪೋಟಿಗೆ ಬಿದ್ದಿದ್ದಾರೆ ಎಂದು ಚುಚ್ಚಿದರು.
ಆರ್‌ಎಸ್‌ಎಸ್ ಬ್ಯಾನ್ ಮಾಡಲು ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಧ್ಯವಾಗಿಲ್ಲ. ಇನ್ನು ಇವರಿಗೆ ಆಗುತ್ತಾ? ಪ್ರಚಾರಕ್ಕಾಗಿ ಇಂಥ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆ. ತಮಗೆ ಜೀವ ಬೆದರಿಕೆ ಇದೆ ಎನ್ನುವ ಪ್ರಿಯಾಂಕ್ ಬೆದರಿಕೆ ಕೆರೆ ಮಾಡಿದವರ ಪೋನ್ ನಂಬರ್ ಹೇಳಬೇಕಲ್ವಾ? ಬರೀ ನಾಲ್ಕು ನಂಬರ್ ಹೇಳುತ್ತಿದ್ದಾರೆ. ಅಲ್ಲದೇ ತಮ್ಮದೇ ಸರ್ಕಾರ ಇದೆ. ಬೆದರಿಕೆ ಹಾಕಿದ್ದರೆ ಅಂತವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದು ಸಹ ಅವರ ಪ್ರಚಾರದ ಒಂದು ಭಾಗವಾಗಿದೆ ಅಷ್ಟೆ. ಹೀಗೆ ಹೇಳುವ ಮೂಲಕ ತಮ್ಮ ಭದ್ರತೆಗೆ ಇನ್ನಷ್ಟು ಪೊಲೀಸರನ್ನು ಹೆಚ್ಚಿಸಿಕೊಳ್ಳುವುದಾಗಿದೆ ಎಂದು ಲೇವಡಿ ಮಾಡಿದರು.