ಗದಗ: ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲದ ಕಾರಣದಿಂದ ಸಿದ್ದರಾಮಯ್ಯ ಸಮಾಜವನ್ನು ಜಾತಿ ಆಧಾರಿತವಾಗಿ ಒಡೆಯುವ ರಾಜಕಾರಣ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಾಕ್ರೋಶ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಬಿಡಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಸಿದ್ದರಾಮಯ್ಯ, ಈಗ ಜಾತಿ ಜನಗಣತಿ ನೆಪದಲ್ಲಿ ಸಮಾಜವನ್ನು ವಿಭಜಿಸುತ್ತಿದ್ದಾರೆ. ಬ್ರಿಟಿಷರ ಕಾಲದ ’ಒಡೆದು, ಆಳುವ’ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವು 20 ತಿಂಗಳ ಅವಧಿಯಲ್ಲಿ ಹಾಲಿನ ಬೆಲೆ 9 ರೂಪಾಯಿ ಹೆಚ್ಚಿಸಿದ್ದು, ಇದರಿಂದ ಬಡವರು ಮತ್ತು ರೈತರ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿದ್ದ 38,500 ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಲಾಗಿದೆ. ಇದರ ಜತೆಗೆ ಮುಸ್ಲಿಂ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರಾೃ ನಂತರದ ದೀರ್ಘ ಅವಧಿ ಆಡಳಿತ ನಡೆಸಿದ ಕಾಂಗ್ರೆಸ್ ದಲಿತ ನಾಯಕರಿಗೆ ಸದಾ ಅಣೆಕಟ್ಟಿದೆ. ಅಂಬೇಡ್ಕರ್ ಸೋಲಿಗೆ ಕಾರಣವಾದ ಪಕ್ಷವೇ ಕಾಂಗ್ರೆಸ್ ಎಂದು ಟೀಕಿಸಿದರು.
ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಶಾಸಕ ಹರೀಶ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಎನ್. ರವಿಕುಮಾರ್, ಮುಖಂಡರಾದ ಅನಿಲ ಮೆಣಸಿನಕಾಯಿ, ಉಮೇಶಗೌಡ ಪಾಟೀಲ, ನಿರ್ಮಲಾ ಕೊಳ್ಳಿ, ಉಷಾ ದಾಸರ, ವಿಜಯಕುಮಾರ ಗಡ್ಡಿ, ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.