ಹಾಸನ: ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ತರಾತುರಿಯಲ್ಲಿ ಸೇರ್ಪಡೆ ಮಾಡಿಕೊಂಡಿದ್ದರಿಂದ ಬಹಳ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಗೆಹರಿಸುವೆ. ಈ ಸಂಬಂಧ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಭರವಸೆ ನೀಡಿದರು.
ನಗರದ ಉದಯಗಿರಿ ಉದ್ಯಾನವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಗರಸಭೆಯಲ್ಲಿ ಹಲವು ಸಮಸ್ಯೆ ಇವೆ. ಈ ಹಿಂದೆ ಸುತ್ತಮುತ್ತಲ 25 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳುವಾಗ ಕಸ ವಿಲೇವಾರಿ, ಯುಜಿಡಿ ಲೈನ್ ಬಗೆಹರಿಸಿ ಸೇರ್ಪಡೆ ಮಾಡಬೇಕಿತ್ತು. ಆದರೆ, ತರಾತುರಿಯಲ್ಲಿ ಸೇರ್ಪಡೆ ಮಾಡಿದ್ದರಿಂದ ಬಹಳ ಸಮಸ್ಯೆ ಎದುರಾಗಿದೆ. ಇದನ್ನು ಬಗೆಹರಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ನಗರದ ಅಭಿವೃದ್ಧಿಗೆ ನನ್ನದೆಯಾದ ಯೋಜನೆಗಳಿದ್ದು, ಎಲ್ಲರ ಸಹಕಾರದೊಂದಿಗೆ ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಈ ಭಾಗದ ಎಲ್ಲ ಜನರು ನನಗೆ ಶಕ್ತಿ ತುಂಬಿದ್ದಾರೆ. ಇದಕ್ಕಾಗಿ ಧನ್ಯವಾದ ಹೇಳುವೆ. ನನ್ನ ಮೇಲೆ ನಿರೀಕ್ಷೆ ಇಟ್ಟು ಬೆಂಬಲ ನೀಡಿದ್ದೀರಿ. ನಿಮ್ಮ ಬೆಂಬಲಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ. ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವೆ. ನನ್ನ ತಂದೆಗೂ ನೀವು ಅಪಾರ ಪ್ರೀತಿ- ಗೌರವ ತೋರಿದ್ದೀರಿ. ಎಲ್ಲರಿಗೂ ಧನ್ಯವಾದ ಹೇಳುವೆ ಎಂದರು.
ನಾನು ಶಾಸಕನಾಗಿ ವಿಧಾನಸಭೆಗೆ ಹೋದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡುವಂತೆ ರೇವಣ್ಣ ಸಾಹೇಬ್ರು ಸೂಚಿಸಿದ್ದರು. ಅದರಂತೆ ಭೇಟಿ ಮಾಡಿದೆ. ಸಿಎಂ ಆದಿಯಾಗಿ ಎಲ್ಲ ಸಚಿವರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರೆಲ್ಲರ ಸಹಕಾರ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಚಿಕ್ಕಪುಟ್ಟ ವ್ಯತ್ಯಾಸಗಳಾದರೂ ನನಗೆ ಸಲಹೆ, ಸೂಚನೆ ಕೊಡಿ. ಅದರಂತೆ ನಾನು ಮುನ್ನಡೆಯುವೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಕುವೆಂಪುನಗರದಲ್ಲಿ ಖಾಲಿ ಇರುವ ನಿವೇಶನವನ್ನು ಕಸಾಪಗೆ ಮಂಜೂರು ಮಾಡಿದರೆ, ತಾಲ್ಲೂಕು ಪರಿಷತ್ ಭವನ ನಿರ್ಮಾಣ ಮಾಡಲಾಗುವುದು. ಈ ಭಾಗದಲ್ಲಿ ಹಿರಿಯ ನಾಗರಿಕರು, ಸಾಹಿತ್ಯಾಸಕ್ತರು ಇದ್ದಾರೆ. ಇಲ್ಲೇ ಭವನ ಮಾಡಿದರೆ ಸಾಹಿತ್ಯ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಗಮನ ಸೆಳೆದರು.
ಇದೇ ವೇಳೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ, 4ನೇ ವಾರ್ಡ್ ಸದಸ್ಯ ವಾಸುದೇವ್, ರಾಮಸ್ವಾಮಿ, ಶಂಕರಲಿಂಗೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಸದಸ್ಯ ಮಂಜಣ್ಣ, ಮಾಜಿ ಸದಸ್ಯ ರವಿಶಂಕರ್, ಜಿಲ್ಲಾ ವಾಲ್ಮೀಕಿ ಸಮುದಾಯದ ಮಹಾಂತಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಇದ್ದರು.