ಬಸವಕಲ್ಯಾಣದ ಪಂಚಾಯತ್ ರಾಜ್ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಉದಯಕುಮಾರ ಮುಳೆ, ಪ್ರದೀಪ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಮಲ್ಲಿಕಾರ್ಜುನ ಬಂಡೆ, ಡಿ.ಕೆ. ಪ್ರಹ್ಲಾದ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಪೂಜ್ಯ ಭಾಗ್ಯವಂತಿ ಮಾತಾಜಿ, ದಿಲೀಪಕುಮಾರ ಉತ್ತಮ, ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಬಾವಿದೊಡ್ಡಿ, ನರಸಿಂಗರೆಡ್ಡಿ, ಡಾ.ಬಸವರಾಜ ಸ್ವಾಮಿ, ಆಕಾಶ ಖಂಡಾಳೆ ಇದ್ದರು. 
ಜಿಲ್ಲೆ

ಸಮಸ್ಯೆಗೆ ಸ್ಪಂದಿಸುವಲ್ಲಿ ಮಾಧ್ಯಮ ಪಾತ್ರ ಮಹತ್ವದ್ದು

ಬಸವಕಲ್ಯಾಣ: ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಸಮಾಜ ಸುಧಾರಣೆಯಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ತ್ರಿಪುರಾಂತ ಸಂಸ್ಥಾನ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನುಡಿದರು.

ನಗರದ ಪಂಚಾಯತ್ ರಾಜ್ ಪದವಿಪೂರ್ವ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಪ್ರತಿಭೆಗೆ ಪ್ರೋತ್ಸಾಹ, ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದು ಅವಶ್ಯಕ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ ಮಾತನಾಡಿ, ಹೆಚ್ಚಿನ ಅಂಕದೊಂದಿಗೆ ಪಾಸಾಗಲು ವಿಷಯಾಧಾರಿತ ಪಠ್ಯಕ್ರಮ ಜತೆಗೆ ಸಂಪೂರ್ಣ ಜ್ಞಾನ ವೃದ್ಧಿಗೆ ಪತ್ರಿಕೆಗಳನ್ನು ಓದುವುದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಸಿದ್ಧಾರ್ಥ ಬಾವಿದೊಡ್ಡಿ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥ ಭಾವದಿಂದ ಕೆಲಸ ಮಾಡುವವರನ್ನು ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೆಗಾಂವ, ಡಾ.ಬಸವರಾಜ ಸ್ವಾಮಿ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿದರು. ಪತ್ರಕರ್ತ ಕಲ್ಯಾಣರಾವ ಮದರಗಾಂವಕರ್ ಪ್ರಾಸ್ತಾವಿಕ ಮಾತನಾಡಿದರು.

ನಿರಗುಡಿಯ ಪೂಜ್ಯ ಭಾಗ್ಯವಂತಿ ಮಾತಾಜಿ, ಪಾರ್ವತಿ ಮಹಿಳಾ ಮಂಡಳ ಅಧ್ಯಕ್ಷೆ ಆಶಾರಾಣಿ ಬಾವಿದೊಡ್ಡಿ, ಡಾ.ಮಹಲೇಶ, ಪತ್ರಕರ್ತರಾದ ಉದಯಕುಮಾರ ಮುಳೆ, ಪ್ರದೀಪ ವಿಸಾಜಿ, ಸೂರ್ಯಕಾಂತ ಮದಕಟ್ಟಿ, ವೀರಶೆಟ್ಟಿ ಮಲಶೆಟ್ಟಿ, ಮಲ್ಲಿಕಾರ್ಜುನ ಬಂಡೆ, ಡಿ.ಕೆ. ಪ್ರಹ್ಲಾದ, ಉಪನ್ಯಾಸಕರಾದ ರೇಣುಕಾ, ಸುನಿತಾ, ದೇವಿಕಾ, ಮಾಯಾ, ಚಾಂದಸಾಬ್, ಪ್ರೀತಿ ಉಪಸ್ಥಿತರಿದ್ದರು. ಹಣಮಂತ ಕೋಟೆ ಸ್ವಾಗತಿಸಿದರು. ಲಕ್ಷ್ಮೀ ಪೋಪಟೆ ವಂದಿಸಿದರು. ಉಪನ್ಯಾಸಕ ಮಹಾದೇವ ಪೂಜಾರಿ ನಿರೂಪಣೆ ಮಾಡಿದರು.