ಜಿಲ್ಲೆ

ಸಮಸ್ಯೆಗೆ ಕಿವಿಗೊಡಲು ಸಹಾಯವಾಣಿ

ಕೋಲಾರ: ಹಿರಿಯ ನಾಗರಿಕರು ಕಿರುಕುಳ, ಶೋಷಣೆ, ಮಾಸಿಕ ತುಮುಲ ಇನ್ನಿತರ ಸಮಸ್ಯೆಗಳಿಗೆ ಸ್ಪಂದಿಸುವ, ತುರ್ತು ಸಹಾಯಕ್ಕೆ ಓಗೊಡುವ ನಿಟ್ಟಿನಲ್ಲಿ ವಿಶ್ವ ಹಿರಿಯರ ದಿನವಾದ ಅ. 1ರಂದು ರಾಷ್ಟ್ರೀಯ ಸಹಾಯವಾಣಿ 14567 ಲೋಕಾರ್ಪಣೆಗೊಳ್ಳಲಿದೆ.

ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರಸ್ತುತ ಆಯಾ ರಾಜ್ಯಗಳಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳ ನಿವಾರಣೆ, ತುರ್ತು ಸಹಾಯಕ್ಕಾಗಿ ಆಯಾ ರಾಜ್ಯಗಳ ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರಗಳಿವೆ. ಕರ್ನಾಟಕದಲ್ಲಿ ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದೀಗ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಸಹಾಯವಾಣಿ ಕೇಂದ್ರ ತೆರೆಯುತ್ತಿದ್ದು, ಆಯಾ ರಾಜ್ಯಗಳ ಕೇಂದ್ರ ಸ್ಥಾನಗಳಲ್ಲಿ ಸಹಾಯವಾಣಿ ಕೇಂದ್ರಗಳು ಅ. 1ರಿಂದ ಕಾರ್ಯನಿರ್ವಹಿಸಲಿವೆ. ಯಾವುದೇ ರಾಜ್ಯದ ಹಿರಿಯ ನಾಗರಿಕರು ಸಮಸ್ಯೆಗಳಿಗೆ ಶುಲ್ಕ ರಹಿತ ದೂರವಾಣಿ ಸಂಖ್ಯೆ 14567ಗೆ ಕರೆ ಮಾಡಿ ನೆರವು ಪಡೆಯಬಹುದು. ರಾಷ್ಟ್ರಮಟ್ಟದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ದು ಚಾಲನೆ ನೀಡಿದರೆ, ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ.

8ರಿಂದ 12 ಕರೆಗಳು: ಜಿಲ್ಲಾ ಎಸ್ಪಿ ಕಚೇರಿ ಆವರಣದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ-1090 ಕೇಂದ್ರದಲ್ಲಿ ದಿನನಿತ್ಯ ಸರಾಸರಿ 8ರಿಂದ 12 ಕರೆ ಬರುತ್ತವೆ. ಪ್ರಮುಖವಾಗಿ ಹಿರಿಯ ನಾಗರಿಕರು, ಬಸ್, ರೈಲು ಸೇವೆ, ತಿರುಪತಿ, ಧರ್ಮಸ್ಥಳ ಇನ್ನಿತರ ಧಾರ್ಮಿಕ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಲಭ್ಯವಿರುವ ಅನುಕೂಲಗಳ ಕುರಿತು, ಕೌಟುಂಬಿಕ ಕಿರುಕುಳ, ಶೋಷಣೆ ಸಂಬಂಧಿಸಿದ ಮಾಹಿತಿ ಕೋರಿ ಕರೆ ಬರುತ್ತಿವೆ ಎಂದು ಕೇಂದ್ರದ ಸಂಯೋಜಕ ರಾಮಚಂದ್ರ ಮಾಹಿತಿ ನೀಡಿದ್ದಾರೆ.

8 ಪ್ರಕರಣ: ಹಿರಿಯ ನಾಗರಿಕರನ್ನು ಮಕ್ಕಳು, ಕುಟುಂಬಸ್ಥರು ನಿರ್ಲಕ್ಷಿಸುತ್ತಿದ್ದಲ್ಲಿ, ಶೋಷಣೆ, ಆಸ್ತಿ ಹಕ್ಕು ಕಸಿದುಕೊಂಡ ಪ್ರಕರಣಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007 ಅನುಷ್ಠಾನಗೊಳಿಸಿದ್ದು, ರಾಜ್ಯದಲ್ಲಿ 2008ರಲ್ಲಿ ಜಾರಿಗೊಳಿಸಲಾಗಿದೆ. ಕಂದಾಯ ಉಪವಿಭಾಗದಲ್ಲಿ ನ್ಯಾಯ ಮಂಡಳಿ ಇದ್ದು, ಉಪವಿಭಾಗಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಯಲ್ಲಿ ಸುಮಾರು 8 ಪ್ರಕರಣ ನ್ಯಾಯ ಮಂಡಳಿ ಮುಂದಿದೆ.

ಹಗಲು ಯೋಗಕ್ಷೇಮ ಕೇಂದ್ರ: ಸೇವೆಯಿಂದ ನಿವೃತ್ತಿ ಹೊಂದಿ ವಿಶ್ರಾಂತಿ ಪಡೆಯುತ್ತಿರುವ, ಮನೆಯಲ್ಲೇ ಕುಳಿತು ಬೇಸರಗೊಂಡಿರುವ 60 ವರ್ಷ ಮೇಲ್ಪಟ್ಟ ಹಿರಿಯ ಜೀವಗಳಿಗೆ ಕಾಲ ಕಳೆಯಲು ಹಗಲು ಯೋಗಕ್ಷೇಮ ಕೇಂದ್ರಗಳನ್ನು ಸ್ವಯಂಸೇವಾ ಸಂಸ್ಥೆಗಳ ಮೂಲಕ ಸರ್ಕಾರ ನಡೆಸುತ್ತದೆ. ಒಂದು ಕೇಂದ್ರದಲ್ಲಿ 50ರಿಂದ 150 ಫಲಾನುಭವಿಗಳಿಗೆ ಅವಕಾಶವಿದೆ. ಕೇಂದ್ರ ಸರ್ಕಾರದಿಂದ ಗರಿಷ್ಠ 6 ಲಕ್ಷ ರೂ. ಅನುದಾನ ಸಿಗುತ್ತದೆ. ಜಿಲ್ಲೆಯಲ್ಲೂ ಹಿಂದೆ ಸ್ವಯಂಸೇವಾ ಸಂಸ್ಥೆಯೊಂದು ಹಗಲು ಯೋಗಕ್ಷೇಮ ಕೇಂದ್ರ ನಡೆಸುತ್ತಿತ್ತಾದರೂ ಸಮರ್ಪಕ ನಿರ್ವಹಣೆಯಿಲ್ಲದೆ ಮುಚ್ಚಿರುವುದರಿಂದ ಹಿರಿಯ ನಾಗರಿಕರು ಸೌಲಭ್ಯ ವಂಚಿತರಾಗಿದ್ದಾರೆ.

ಲಸಿಕೆಯಲ್ಲಿ ಪ್ರಥಮ: ಜಿಲ್ಲೆಯಲ್ಲಿ 1.71 ಲಕ್ಷ ಹಿರಿಯ ನಾಗರಿಕರಿದ್ದು, ಕರೊನಾ ಲಸಿಕಾಕರಣದಲ್ಲಿ ಮೊದಲ ಹಂತದಲ್ಲೇ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಈವರೆಗೆ ಶೇ. 95 ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಮೂಲಕ ರಾಜ್ಯದಲ್ಲೇ ಕೋಲಾರ ಪ್ರಥಮ ಸ್ಥಾನದಲ್ಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಹಗಲು ಯೋಗಕ್ಷೇಮ ಕೇಂದ್ರ: ಜಿಲ್ಲೆಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಸರ್ಕಾರದಿಂದ ಅನುಮೋದನೆ ಸಿಗುವ ನಿರೀಕ್ಷೆ ಇದೆ.

ಹಿರಿಯ ನಾಗರಿಕರ ದೂರು ದುಮ್ಮಾನಗಳಿಗೆ ಸ್ಪಂದಿಸಲು ರಾಷ್ಟ್ರ ಮಟ್ಟದಲ್ಲಿ ಶುಲ್ಕ ರಹಿತ ದೂರವಾಣಿ ಸಂಖ್ಯೆ ಅ.1ರಂದು ಲೋಕಾರ್ಪಣೆಗೊಳ್ಳಲಿದ್ದು, ರಾಜ್ಯದಲ್ಲಿ ಬೆಂಗಳೂರಿನ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸಹಾಯವಾಣಿ ಕೇಂದ್ರ ನಿರ್ವಹಿಸಲಿದೆ. ಸಹಾಯವಾಣಿಗೆ ಯಾವ ರಾಜ್ಯದವರು ಕರೆ ಮಾಡಿದರೂ ಆಯಾ ಜಿಲ್ಲೆಗಳ ಸಂಯೋಜಕರಿಗೆ ಮಾಹಿತಿ ರವಾನೆಯಾಗುತ್ತದೆ. ಅದಕ್ಕೆ ಸ್ಪಂದಿಸುವ ಕೆಲಸ ಆಗಲಿದೆ. ಬಿ.ಎಂ. ಮುನಿರಾಜಪ್ಪ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ, ಕೋಲಾರ