ಕುಶಾಲನಗರ: ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದ್ದು, ಮನುಷ್ಯನ ಬದುಕಿಗೆ ಸನ್ಮಾರ್ಗ ತೋರಿಸುವ ಸಾಧನವೂ ಆಗಿದೆ ಎಂದು ಮೈಸೂರಿನ ಸಿಪಿಡಬ್ಲುೃಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕೂಡಿಗೆಯ ಸೈನಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿನಿಯರ ರಾಣಿ ಚನ್ನಮ್ಮ ವಸತಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣ ಪ್ರತಿಯೊಬ್ಬ ನಾಗರಿಕನಿಗೆ ಅವಶ್ಯಕ. ಆ ನಿಟ್ಟಿನಲ್ಲಿ ಕೂಡಿಗೆ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವವರು ಅದೃಷ್ಟವಂತರು ಎಂದರು.
ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿ ಪ್ರಿಯಾ ಮಾತನಾಡಿ, ಈ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು. ಅಂತೆಯೇ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿ ಭವಿಷ್ಯದ ಸತ್ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.
ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನಾ ನೃತ್ಯ, ಕರ್ನಾಟಕ ಜನಪದ ನೃತ್ಯಗಳಾದ ಕೋಲಾಟ, ಕಂಸಾಳೆ ನೃತ್ಯಗಳನ್ನು ಪ್ರದರ್ಶಿಸಿದರು. ಶಾಲೆ ಪ್ರಾಂಶುಪಾಲ ಕರ್ನಲ್.ಜಿ.ಕಣ್ಣನ್, ಶಿಕ್ಷಕ ರಾಜ್ ಗೋಲ್ಕರ್ ಇತರರಿದ್ದರು.