ಹನೂರು:
ಸಮರ್ಪಕ ಬಸ್ ಸೌಕರ್ಯವಿಲ್ಲ, ಹದಗೆಟ್ಟ ರಸ್ತೆ, ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರಿರಲ್ಲ, ಸೇತುವೆಗಳಿಲ್ಲದೆ ಜನರ ಪರದಾಟ, ಜತೆಗೆ ಕಾಡು ಪ್ರಾಣಿಗಳ ಕಾಟದಿಂದ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ನ.19ರಂದು ಕೆ.ಎಸ್.ದೊಡ್ಡಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಡಿಸಿ ಡಿ.ಎಸ್.ರಮೇಶ್ ಅವರು ಪರಿಹಾರ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನರು ಇದ್ದಾರೆ.
ತಾಲೂಕು ಕೇಂದ್ರದಿಂದ 45 ಕಿ.ಮೀ, ರಾಮಾಪುರ ಹೋಬಳಿ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಹೊಂದಿರುವ ಮಿಣ್ಯಂ ಗ್ರಾಪಂ ಕೇಂದ್ರ ಸ್ಥಾನವಾಗಿದ್ದು, ಕೆ.ಎಸ್.ದೊಡ್ಡಿ, ಕೊಪ್ಪ, ಗಾಜನೂರು, ಸೂಳೆಕೋಬೆ, ನಕ್ಕುಂದಿ, ತಟ್ಟೆಕೀರನದೊಡ್ಡಿ ಸೇರಿದಂತೆ 11 ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಟ್ಟಿದೆ. ಜಿಲ್ಲಾಧಿಕಾರಿ ಗ್ರಾಮ ವಾಸ್ಯವ್ಯ ನಡೆಯುವ ಕೆ.ಎಸ್.ದೊಡ್ಡಿಯಲ್ಲಿ 81 ಕುಟುಂಬಗಳಿದ್ದು, 404 ಜನಸಂಖ್ಯೆ ಹೊಂದಿದೆ.
ಈ ಗ್ರಾಮಗಳು ಅರಣ್ಯದಂಚಿಗೆ ಹೊಂದಿಕೊಂಡಿದೆ. ಆದರೆ ಮೂಲ ಸೌಕರ್ಯಗಳಿಂದ ಜನರು ವಂಚಿತರಾಗಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಈ ಭಾಗದ ಜನರಿಗೆ ಮುಖ್ಯವಾಗಿ ಸಮರ್ಪಕ ಬಸ್ ಸೌಕರ್ಯದ ಅಗತ್ಯವಿದೆ. ನೆಟ್‌ವರ್ಕ್ ಸಮಸ್ಯೆ ನೀಗಬೇಕಿದೆ. ಹದಗೆಟ್ಟಿರುವ ರಸ್ತೆ ಸರಿಪಡಿಸಬೇಕಿದೆ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯರ ಅಗತ್ಯವಿದೆ. ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ಇನ್ನು ಹಳ್ಳಕೊಳ್ಳಗಳಿಗೆ ಸೇತುವೆ ನಿರ್ಮಾಣ ಆಗಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನತೆ ಮನವಿ ಸಲ್ಲಿಸಲಿದ್ದಾರೆ.