ಜಿಲ್ಲೆ

ಸಮಸ್ಯೆಗಳ ಸುಳಿಯಲ್ಲಿ ಪೊಲೀಸ್ ವಸತಿಗೃಹಗಳು

ಹೊಳೆನರಸೀಪುರ: ಪಟ್ಟಣದ ಪೊಲೀಸ್ ವಸತಿಗೃಹಗಳ ಆವರಣ ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದ್ದು, ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.

ವಸತಿಗೃಹಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಕಸಕಡ್ಡಿ ಶೇಖರಣೆಯಾಗಿ ಕೊಳೆತು ನಾರುತ್ತಿದೆ. ಅಲ್ಲದೆ, ಕಟ್ಟಡಗಳ ಮೇಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ಕೆಲವು ಕಡೆ ಚರಂಡಿ ಮುಚ್ಚಿಹೋಗಿದ್ದು, ಕೊಳಚೆ ನೀರು ಹರಿಯದೆ ದುರ್ವಾಸನೆ ಬೀರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಮಿತಿಮೀರಿದೆ. ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಭೀತಿಯಲ್ಲೇ ಸಿಬ್ಬಂದಿ ಬದುಕುವಂತಾಗಿದೆ.

ಪಟ್ಟಣದ ಮೈಸೂರು ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಂಬೇಡ್ಕರ್‌ನಗರಕ್ಕೆ ಹೊಂದಿಕೊಂಡಂತೆ ಪೊಲೀಸ್ ವಸತಿಗೃಹಗಳಿವೆ. 1967ರಲ್ಲಿ ಈ ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಒಂದು ರೂಮ್, ಅಡುಗೆಮನೆ, ಚಿಕ್ಕ ಹಾಲ್ ಮತ್ತು ಮನೆಯ ಹಿಂಬದಿಯಲ್ಲಿ ಹೊರಗೆ ಸ್ನಾನದ ಮನೆ, ಶೌಚಗೃಹ ನಿರ್ಮಿಸಲಾಗಿದೆ. ಈ ವಸತಿಗೃಹಗಳು ನಿರ್ಮಾಣವಾಗಿ ಸುಮಾರು 56 ವರ್ಷಗಳೇ ಉರುಳಿದ್ದು, ಶಿಥಿಲಾವಸ್ಥೆ ತಲುಪಿವೆ. 20 ವಸತಿಗೃಹಗಳಿದ್ದು, 10 ಸಂಪೂರ್ಣ ಶಿಥಿಲವಾಗಿರುವುದರಿಂದ ಪಾಳುಬಿದ್ದಿವೆ. ಇನ್ನುಳಿದ ಮನೆಗಳಲ್ಲಿ ಸಿಬ್ಬಂದಿ ವಾಸಿಸುತ್ತಿದ್ದಾರೆ.

ಎಲ್ಲ ಮನೆಗಳ ಕಿಟಕಿಗಳು, ಶೌಚಗೃಹ, ಸ್ನಾನಗೃಹದ ಬಾಗಿಲುಗಳು ಮುರಿದಿವೆ. ಸುಣ್ಣ ಬಣ್ಣವಿಲ್ಲದೆ ಪಾಳು ಬಿದ್ದ ಮನೆಗಳಂತಿವೆ. ಮಳೆಗಾಲದಲ್ಲಿ ಕಟ್ಟಡಗಳೆಲ್ಲ ಸೋರುತ್ತಿವೆ. ಹೀಗಾಗಿ ಮನೆಯೊಳಗೆ ಸಂಗ್ರಹವಾದ ನೀರನ್ನು ಹೊರ ಚೆಲ್ಲುವುದೇ ಕೆಲಸವಾಗುತ್ತದೆ. ಕಾಡಿನಂತೆ ಬೆಳೆದು ನಿಂತಿರುವ ಗಿಡಗಂಟಿಗಳಿಂದ ಹಾವುಗಳ ಕಾಟ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ಮನೆಯಿಂದ ಶೌಚಕ್ಕೆ ಹೋಗಲು ಭಯದಿಂದ ತೆರಳಬೇಕಾಗಿದೆ. ಮಕ್ಕಳನ್ನು ಹೊರಗಡೆ ಆಟವಾಡಲು ಬಿಡಲು ಹೆದರುವಂತಾಗಿದೆ. ಸುತ್ತಲೂ ಇರುವ ಕಾಂಪೌಂಡ್ ಹಾಳಾಗಿದ್ದು, ಮುಂಭಾಗದಲ್ಲಿ ಗೇಟ್ ವ್ಯವಸ್ಥೆಯೂ ಇಲ್ಲದಾಗಿದೆ. ಹೀಗಾಗಿ ವಸತಿಗೃಹಗಳಲ್ಲಿ ವಾಸಿಸುವ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ.