ಜಿಲ್ಲೆ

ಸಮಸ್ಯೆಗಳ ಸುಳಿಯಲ್ಲಿ ಚಿಂಚರಕಿ ಶಾಲೆ

ಅಶೋಕ್ ಕುಮಾರ್ ಎನ್

ಕವಿತಾಳ: ಚಿಂಚರಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು ಇತ್ಯರ್ಥಕ್ಕೆ ನಿರ್ಲಕ್ಷೃ ವಹಿಸಲಾಗಿದೆ. ರಸ್ತೆಗೆ ಹೊಂದಿಕೊಂಡಿರುವ ಶಾಲೆ ಧೂಳುಮಯವಾಗಿದ್ದು, ಶೌಚಗೃಹಗಳು ಉಪಯೋಗಿಸುವ ಸ್ಥಿತಿಯಲ್ಲಿಲ್ಲ.

ಚಿಂಚರಕಿ ಗ್ರಾಪಂ ಕೇಂದ್ರವಾಗಿದ್ದು, ಸಿರವಾರ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಇದೆ. ಶಾಲೆಯಲ್ಲಿ 182 ವಿದ್ಯಾರ್ಥಿಗಳಿದ್ದು, ಮುಖ್ಯಶಿಕ್ಷಕಿ, ಅತಿಥಿ ಶಿಕ್ಷಕರೂ ಸೇರಿದಂತೆ 10 ಜನ ಶಿಕ್ಷಕರಿದ್ದಾರೆ. ಶಾಲೆಯಲ್ಲಿ 12 ಕೊಠಡಿಗಳಿದ್ದು, ಶಿಥಿಲಗೊಂಡಿದ್ದರಿಂದ ಕಳೆದ ವರ್ಷ ಆರು ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಾಕಿ ಆರು ಕೊಠಡಿಗಳನ್ನು ನಿರ್ಮಿಸಬೇಕೆಂಬ ಬೇಡಿಕೆ ಇದೆ. ಶೌಚಗೃಹ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರೂ ಅನುದಾನ ಕಡಿಮೆ ಇದೆ ಎಂಬ ಕಾರಣಕ್ಕೆ ಆರಂಭಿಕ ಹಂತದಲ್ಲೇ ಸ್ಥಗಿತಗೊಳಿಸಲಾಗಿದೆ.

ಬೇಳೆ ಗುಣಮಟ್ಟ ಸರಿಯಿಲ್ಲ ಎನ್ನುವ ಕಾರಣಕ್ಕೆ ಬಿಸಿಯೂಟಕ್ಕೆ ಬಳಕೆ ಮಾಡುತ್ತಿಲ್ಲ ಎಂಬುದು ಶಿಕ್ಷಕರ ಮಾತಾಗಿದೆ. ಆದರೆ, ಸರ್ಕಾರದಿಂದ ಬಿಸಿಯೂಟ ಸಾಮಗ್ರಿಗಳು ಬಂದಿಲ್ಲ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಅಕ್ಷರ ದಾಸೋಹ ಅಧಿಕಾರಿ ಹೇಳುತ್ತಿದ್ದಾರೆ. ಶಾಲೆಯನ್ನು ಧೂಳುಮುಕ್ತ ಮಾಡಬೇಕು ಎಂಬುದು ಗ್ರಾಮದ ಮಲ್ಲಿಕಾರ್ಜುನ ಬಾರಕೇರ, ಶರಣಬಸವ, ಅಮರೇಗೌಡ, ಮೆಹಬೂಬ್ ಸಾಬ್ ಹಾಗೂ ಇತರರ ಆಗ್ರಹವಾಗಿದೆ.