ಬಾಗಲಕೋಟೆ: ನಮ್ಮ ಭಾಗದಲ್ಲಿ ಆರೋಗ್ಯಗಳಿಲ್ಲ. ಇದ್ದರು ವೈದ್ಯರು, ಸಿಬ್ಬಂದಿ ಇರಲ್ಲ. ಶೌಚಗೃಹಗಳಿಲ್ಲ. ಮನವಿ ಮಾಡಿದರು ಯಾವ ಅಽಕಾರಿಗಳು ಸ್ಪಂದಿಸಲ್ಲ..! ಹೀಗೆ ನೊರಾರು ಸಮಸ್ಯೆಗಳ ಸರಮಾಲೆ ಮಹಿಳೆಯರು ಬಿಚ್ಚಿಟ್ಟರು.
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೨೪ ರ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಒ ಶಶಿಧರ ಕುರೇರ ಎದುರು ಜಿಲ್ಲೆಯ ಗ್ರಾಮೀಣ, ನಗರ ಭಾಗದ ಮಹಿಳೆಯರು ತಮ್ಮ ಭಾಗದ ಸಮಸ್ಯೆಗಳನ್ನು ತಿಳಿಸಿದರು. ಕೆಲವು ಮಹಿಳೆಯರು ತಮ್ಮ ವಯಕ್ತಿಕ ಬದುಕಿನ, ಕೌಟುಂಬಿಕ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.
ಗಂಗಮ್ಮ ನಿರಲಕೇರಿ ಮಾತನಾಡಿ, ನನಗೆ ಹೆಣ್ಣು ಮಕ್ಕಳೆಂದರೆ ತುಂಬಾ ಪ್ರೀತಿ, ನನಗೆ ನನ್ನ ಮಗಳೆ ಸ್ಪೂರ್ತಿ. ಅವಳನ್ನು ಕೂಡ ನಿಮ್ಮಂತೆ ಅಧಿಕಾರಿ ಮಾಡುವ ಆಸೆ ಇದೆ. ಮಾರ್ಗದರ್ಶನ ಮಾಡಿದ ಎಂದರು. ಲೋಕಾಪುರದಿಂದ ಅಂಗವಿಕಲ ಮಹಿಳೆ ಪಡೆವ್ವಾ ಕಂಬಾರ ಮಾತನಾಡಿ, ನಾನು ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಈ ವರೆಗೂ ನನ್ನ ಖಾತೆಗೆ ಹಣ ಜಮೆಯಾಗಿರುವದಿಲ್ಲ. ತ್ರಿಚಕ್ರ ವಾಹನ ಸೌಲಭ್ಯ ದೊರೆತಿಲ್ಲ ಎಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಽಕಾರಿ ಸೋಮವಾರ ಒಳಗೆ ತ್ರಿಚಕ್ರ ವಾಹನ ನೀಡುವ ವ್ಯವಸ್ಥೆ ಮಾಡಲಾಗುವುದು ಅಂತ ತಿಳಿಸಿ, ಅಂಗವಿಕಲರ ಇಲಾಖೆ ಅಧಿಕಾರಿ ಸವಿತಾ ಕಾಳೆ ಅವರಿಗೆ ಸೂಚಿಸಿದರು.
ಕಟಗೂರ ಗ್ರಾಮದಿಂದ ಸುಮಾ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಮುದಾಯ ಶೌಚಗೃಹ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದಲ್ಲಿ ನನ್ನಂತಹ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಲೋಕಾಪುರದ ರೇಖಾ ನರಹಟ್ಟಿ ಬೀದಿ ದೀಪಗಳನ್ನು ಮತ್ತು ನೀರಿನ ಸಮಸ್ಯೆ ಬಗೆ ಹರಿಸಿ, ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಹಾಗೂ ಸಾಂತ್ವನ, ಸ್ವಾಧಾರ ಕೇಂದ್ರಗಳ ಸಮಾಲೋಚಕರು, ಸಿಬ್ಬಂದಿ ಇದ್ದರು.