ಸೋಮವಾರಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ 77ನೇ ವರ್ಷದ ಸ್ವಾತಂತ್ರೃ ದಿನ ಆಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ಎನ್.ಎಸ್.ನರಗುಂದ, ಸಿ.ಎಸ್.ಗೀತಾ, ಚಂಗಪ್ಪ, ನಾಗೇಶ್, ಸುರೇಶ್ ಇದ್ದರು.  
ಜಿಲ್ಲೆ

ಸಮಸ್ಯೆಗಳ ವಿರುದ್ಧ ಯುವ ಸಮೂಹ ಹೋರಾಟ ಮಾಡಲಿ

ಸೋಮವಾರಪೇಟೆ: ದೇಶದ ಸುರಕ್ಷತೆ, ಭದ್ರತೆ, ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡಲು ಸಂಕಲ್ಪ ಮಾಡಬೇಕೆಂದು ತಹಸೀಲ್ದಾರ್ ಎಸ್.ಎನ್.ನರಗುಂದ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದ ಪ್ರಪಂಚದ ಏಕೈಕ ರಾಷ್ಟ್ರ ಭಾರತ. ಪ್ರಸ್ತುತ ಭಾರತ ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ. ಜತೆಗೆ ಪರಮಾಣು ಸಾಮಾರ್ಥ್ಯದ ದೇಶವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.

ಅಪರಾಧ, ಭ್ರಷ್ಟಾಚಾರ, ಹಿಂಸೆ, ಭಯೋತ್ಪಾದನೆ, ನಕ್ಸಲಿಸಂ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳ ವಿರುದ್ಧ ಭಾರತ ಹೋರಾಡುತ್ತಿದೆ. ಯುವ ಪೀಳಿಗೆ ಒಗ್ಗಟ್ಟಾಗಿ ಇಂತಹ ಸಮಸ್ಯೆಗಳನ್ನು ಕೊನೆಗಾಣಿಸಲು ಪ್ರತಿಜ್ಞೆ ಮಾಡಬೇಕಿದೆ ಎಂದರು.

ದಿನದ ಮಹತ್ವದ ಕುರಿತು ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ, ವಿದ್ಯಾರ್ಥಿನಿ ಶ್ರೀಷಾ, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರಾದ ಎಚ್.ಸಿ.ನಾಗೇಶ್, ಎಸ್.ಎಂ.ಚಂಗಪ್ಪ ಮಾತನಾಡಿದರು. ಇದೇ ಸಂದರ್ಭ ನಿವೃತ್ತ ಸೈನಿಕರಾದ ಸಿಂಗನಳ್ಳಿ ಎಸ್.ಎಂ.ಸುಬ್ರಹ್ಮಣ್ಯ, ಯಡುಂಡೆ ಸುಭೇದಾರ್ ಬಿ.ಆರ್.ಈರಪ್ಪ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಚೌಡ್ಲು ಗ್ರಾ.ಪಂ.ಉಪಾಧ್ಯಕ್ಷ ನತೀಶ್ ಮಂದಣ್ಣ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಬಿ.ಈ.ಜಯೇಂದ್ರ, ಇಒ ಜಯಣ್ಣ, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್ ನಿಂದ ಗೌರವ ರಕ್ಷೆ ನಡೆಯಿತು. ವಿಶ್ವಮಾನವ ಕುವೆಂಪು ಶಾಲಾ ಮಕ್ಕಳು ರಾಷ್ಟ್ರಗೀತೆ, ಸಾಂಧೀಪನಿ ಶಾಲಾ ವಿದ್ಯಾರ್ಥಿಗಳ ಧ್ವಜಗೀತೆ, ಓಎಲ್‌ವಿ ಶಾಲಾ ವಿದ್ಯಾರ್ಥಿಗಳ ರೈತಗೀತೆ, ಸಂತ ಜೋಸೆಫರ ಶಾಲಾ ಮಕ್ಕಳು ನಾಡಗೀತೆ ಗಮನ ಸೆಳೆಯಿತು.