ಇಂಡಿ: ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಬ್ಯಾಂಕ್ ರಾಷ್ಟ್ರೀಕರಣ, ಗರೀಬಿ ಹಠಾವೋ, ನೀರಾವರಿ, ರಸ್ತೆಗಳು, ಶಾಲಾ ಕಾಲೇಜು, ವಿಶ್ವ ವಿದ್ಯಾಲಯಗಳು, ಇಸ್ರೊ ಸಂಸ್ಥೆ ಕಟ್ಟುವಂತಹ ಹಲವಾರು ಕೆಲಸಗಳನ್ನು ಮಾಡಿದೆ ಎಂದು ವಿಜಯಪುರ ಲೋಕ ಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಆರ್.ಆಲಗೂರ (ರಾಜು) ಹೇಳಿದರು.
ಪಟ್ಟಣದ ಅಮರ್ ಹೋಟೆಲ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಲೋಕಸಭೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಬಳ್ಳೊಳ್ಳಿ (ಈಗಿನ ನಾಗಠಾಣ) ಮತಕ್ಷೇತ್ರಕ್ಕೆ ಎರಡು ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇದೀಗ ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿದೆ. ಕಳೆದ 30 ವರ್ಷಗಳಿಂದ (3 ಸಲ ಚಿಕ್ಕೋಡಿ, 3 ಸಲ ವಿಜಯಪುರ) ರಮೇಶ ಜಿಗಜಿಣಗಿ ಅವರಿಗೆ ಮತ ನೀಡಿದ್ದೀರಿ. ಆದರೆ ಅವರು ನಮ್ಮ ಭಾಗದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಒಂದೂ ಪ್ರಶ್ನೆ ಎತ್ತಿಲ್ಲ. ನಮ್ಮ ಭಾಗದ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ ಎಂದು ಆರೋಪಿಸಿದರು. ಈ ಸಲ ನನಗೆ ಮತ ನೀಡಿ ಆಯ್ಕೆ ಮಾಡಿದರೆ ನಮ್ಮ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅಭಿವೃದ್ಧಿಯ ಪರ್ವ ಪ್ರಾರಂಭಿಸುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಕೊಟ್ಟ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಜು ಆಲಗೂರ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರಾಜ್ಯದ ಮುಖ್ಯಮಂತ್ರಿಗಳ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ, ಎಂ.ಆರ್. ಪಾಟೀಲ, ಜೆಟ್ಟೆಪ್ಪ ರವಳಿ, ಡಿ.ಎಲ್. ಚವ್ಹಾಣ, ಗುರನಗೌಡ ಪಾಟೀಲ, ತಮ್ಮಣ್ಣ ಪೂಜಾರಿ, ಬಾಬುಸಾಹುಕಾರ ಮೇತ್ರಿ, ಜಾವೀದ ಮೋಮಿನ್ ಮಾತನಾಡಿದರು.
ಮುಖಂಡರಾದ ಬಿ.ಎಂ. ಕೋರೆ, ಸಿದ್ರಾಮಪ್ಪಗೌಡ ಪಾಟೀಲ, ಭೀಮಣ್ಣ ಕವಲಗಿ, ಕಾಮೇಶ ಉಕ್ಕಲಿ, ಶಾಂತುಗೌಡ ಬಿರಾದಾರ, ಮಹದೇವ ಪೂಜಾರಿ, ಕಲ್ಲನಗೌಡ ಬಿರಾದಾರ, ಮಹಾದೇವ ಗಡ್ಡದ, ಮಲ್ಲನಗೌಡ ಪಾಟೀಲ, ಚನಗೊಂಡ ಬಿರಾದಾರ, ಭೀಮನಗೌಡ ಪಾಟೀಲ, ಚಂದ್ರಶೇಖರ ರೂಗಿ, ಶೈಲಜಾ ಜಾಧವ ಉಪಸ್ಥಿತರಿದ್ದರು.