ಚಿತ್ರದುರ್ಗ: 250 ಹಾಸಿಗೆ ಸಾಮರ್ಥ್ಯವಿರುವ ಜಿಲ್ಲಾಸ್ಪತ್ರೆಯನ್ನು 450 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಲ್ಲೂ ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಿಕೊಳ್ಳಲು ಅನುಮತಿ ಪಡೆಯಿರಿ. ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ…
ಜಿಲ್ಲಾಸ್ಪತ್ರೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳ ಗಮನ ಸೆಳೆದು, ಸೂಚಿಸಿದ ಪರಿ ಇದು.
ಹೆಚ್ಚುವರಿಯಾಗಿ ತಲಾ 10 ಮಂದಿ ಶುಶ್ರೂಷಕರು, ಗ್ರೂಪ್ ‘ಡಿ’ ಅಡಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಶೀಘ್ರ ವೇತನ ಬಿಡುಗಡೆಗೊಳಿಸಿ. ಸರ್ಕಾರದ ಮಾರ್ಗಸೂಚಿ ಅನ್ವಯ ಅವರ ಸೇವೆ ಮುಂದುವರೆಸಿ. ಈವರೆಗೂ ದುಡಿದವರಿಗೆ ಅನ್ಯಾಯ ಮಾಡುವುದು ಬೇಡ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಾಕೀತು ಮಾಡಿದರು.
ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳ ಪಟ್ಟಿ ತಯಾರಿಸಿ, ಮಾಹಿತಿ ನೀಡಿ. ಈ ಕುರಿತು ಆರೋಗ್ಯ ಸಚಿವರ ಗಮನ ಸೆಳೆದು, ಸೌಲಭ್ಯಗಳ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಎಬಿಆರ್‌ಕೆ ಪ್ರಗತಿ ಸಾಧಿಸಿ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಶೇ 80ರಷ್ಟು ಗುರಿ ತಲುಪಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಔಷಧ ಲಭ್ಯವಿರಲಿ: ಯಾವುದೇ ಕಾರಣಕ್ಕೂ ಜಿಲ್ಲಾಸ್ಪತ್ರೆಯ ವೈದ್ಯರು ಔಷಧ ಹೊರಗಡೆ ಪಡೆಯಲು ಚೀಟಿ ಬರೆದು ಕೊಡಬೇಡಿ. ಈ ಕುರಿತು ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಾಕೀತು ಮಾಡಿದರು. ಈ ಕುರಿತು ಎಲ್ಲಾ ವೈದ್ಯರಿಗೂ ಸೂಚಿಸಲಾಗಿದೆ. ರೆಫರೆನ್ಸ್ ಕೂಡ ಕಡಿಮೆಯಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರತಿಕ್ರಿಯಿಸಿದರು.
ಔಷಧಿಗಳು, ಆರೋಗ್ಯ ಉಪಕರಣಗಳು, ಲ್ಯಾಬ್ ರಾಸಾಯನಿಕಗಳು, ಮೆಡಿಸಿನಲ್ ಆಕ್ಸಿಜನ್, ಎಕ್ಸೃ್ರೇ ಫಿಲಂಗಳು, ಯಂತ್ರೋಪಕರಣಗಳು ಮತ್ತು ವಿದ್ಯುತ್ ಸರಬರಾಜು ದುರಸ್ತಿ, ಆರ್ಥೋ ಇಂಪ್ಲಾಂಟ್‌ಗಳು, ಲಿನನ್ ಸಾಮಾಗ್ರಿಗಳು, ಇಂಧನ, ನೀರು ಪೂರೈಕೆ, ಶೌಚಗೃಹ ದುರಸ್ತಿ ಇತರೆ ಸೌಲಭ್ಯ ಸೇರಿ 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಜಿಲ್ಲಾಸ್ಪತ್ರೆಗೆ 13 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸಭೆಗೆ ಮಾಹಿತಿ ನೀಡಿದರು.
ಆರ್ಥೋ, ಕಣ್ಣು, ಜನರಲ್ ಸರ್ಜರಿ, ರಕ್ತನಿಧಿ ಕೇಂದ್ರ, ಪಿಡಿಯೋಟ್ರಿಕ್ಸೃ್, ಫೋರೆನ್ಸಿಕ್ ವಿಭಾಗಗಳಿಗೆ ಅವಶ್ಯವಾಗಿ ಬೇಕಾಗಿರುವ ಯಂತ್ರೋಪಕರಣಗಳನ್ನು ನಿಯಮಾನುಸಾರ ಸಮಿತಿಯಲ್ಲಿನ ಅನುದಾನ ಲಭ್ಯತೆಯ ಅನ್ವಯ ಸರಬರಾಜು ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿದರು.
ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಭಾರತೀಯ ವೈದ್ಯ ಸಂಘ ಜಿಲ್ಲಾ ಶಾಖೆಯ ಡಾ.ದಿನೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಹಿರಿಯ ಶುಶ್ರೂಷಕ ಮಲ್ಲಣ್ಣ ಇತರರಿದ್ದರು.