ಜಿಲ್ಲೆ

ಸಮಸ್ಯೆ ಬಗೆಹರಿಸಲು ಸದಾಬದ್ಧ

ಕಾರವಾರ/ಭಟ್ಕಳ: ‘ಕಳೆದ ಆರು ವರ್ಷದ ಅವಧಿಯಲ್ಲಿ ನಾನು ಮಾಡಿದ ಕಾರ್ಯಗಳು. ಬಿಜೆಪಿ ಸರ್ಕಾರಗಳ ಯೋಜನೆ, ಸಾಧನೆಗಳನ್ನು ಪರಿಗಣಿಸಿ ನನಗೆ ಮೊದಲ ಪ್ರಾಶಸ್ಱದ ಮತ ನೀಡಿ ಗೆಲ್ಲಿಸಿ’ ಎಂದು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮನವಿ ಮಾಡಿದರು.

ಭಟ್ಕಳ ಹಾಗೂ ಕಾರವಾರದಲ್ಲಿ ವಿವಿಧೆಡೆ ಪ್ರಚಾರ ಕಾರ್ಯದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾನು ಪ್ರಾಧ್ಯಾಪಕನಾಗಿದ್ದ ಕಾರಣ ಸಹಜವಾಗಿ ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಅರಿವು ಹಾಗೂ ಅವರ ಜತೆ ಸಂಪರ್ಕ ಹೆಚ್ಚಿದೆ. ಆದರೆ, ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ರಾಜ್ಯದ 36 ಇಲಾಖೆ ನೌಕರರು ಹಾಗೂ ಇತರ ಪದವೀಧರರ ವಿವಿಧ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ವಿಧಾನಪರಿಷತ್​ನಲ್ಲಿ ಧ್ವನಿ ಎತ್ತಿದ್ದೇನೆ. ಪದವೀಧರರಿಗೆ ಸ್ಟೈಪಂಡ್ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಮಾಡಿ ಎಲ್ಲೆಡೆ ಕನಿಷ್ಠ 500 ಜನರಿಗೆ ಉದ್ಯೋಗ ಸಿಗುವಂತೆ ಮಾಡಿದ್ದೇನೆ. ನಾನು ಮಾಡಿದ ಕಾರ್ಯಗಳ ಬಗ್ಗೆ ಎರಡು ಪುಸ್ತಕ ಬಿಡುಗಡೆ ಮಾಡಿದ್ದೇನೆ. ಇಷ್ಟಾದರೂ ನಾನು ಎಲ್ಲ ಸಮಸ್ಯೆ ಬಗೆಹರಿಸಿದ್ದೇನೆ ಎಂದು ಹೇಳುವುದಿಲ್ಲ. ಪದವೀಧರರ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಈ ಬಾರಿ ಮತ್ತೊಮ್ಮೆ ಅವಕಾಶ ನೀಡಿದಲ್ಲಿ ಅವುಗಳನ್ನು ಬಗೆಹರಿಸಲು ಕಟಿ ಬದ್ಧವಾಗಿದ್ದೇನೆ ಎಂದರು.

ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಇರುವುದರಿಂದ ನನಗೆ ಕೆಲಸ ಮಾಡಲು ಇನ್ನಷ್ಟು ಬಲ ಬಂದಂತಾಗಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಬಿಜೆಪಿ ರಾಜ್ಯ ಮೀನುಗಾರರ ಮೋರ್ಚಾ ಉಪಾಧ್ಯಕ್ಷ ಗಣಪತಿ ಉಳ್ವೇಕರ್, ವಕ್ತಾರ ನಾಗರಾಜ ನಾಯಕ, ಸಂಚಾಲಕ ರಾಜೇಶ ನಾಯ್ಕ ಸಿದ್ದರ ಇದ್ದರು.

ಭಟ್ಕಳದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಘಟಕಾಧ್ಯಕ್ಷ ಸುಬ್ರಾಯ ದೇವಾಡಿಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತರಾಮ, ಹಿಂದುಳಿದ ಮೋರ್ಚಾ ತಾಲೂಕು ಅಧ್ಯಕ್ಷ ರವಿ ನಾಯ್ಕ ಜಾಲಿ, ರಾಜೇಶ ನಾಯ್ಕ, ಧನ್ಯಕುಮಾರ ಜೈನ್, ಶ್ರೀಕಾಂತ ನಾಯ್ಕ, ಸುರೇಶ ಹರಿಕಾಂತ, ಮೋಹನ ನಾಯ್ಕ, ದಿನೇಶ ನಾಯ್ಕ ಇತರರು ಇದ್ದರು.</