ಜಿಲ್ಲೆ

ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಅಗತ್ಯ

ಸಿರಗುಪ್ಪ: ಅರಣ್ಯನಾಶ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಜೀವವೈವಿದ್ಯತೆಯ ನಷ್ಟದಂತಹ ಸಮಸ್ಯೆಗಳನ್ನು ಪರಿಹರಿಸಲು ತುರ್ತು ಕ್ರಮ ಅಗತ್ಯ ಎಂದು ಸಿವಿಲ್ ನ್ಯಾಯಾಧೀಶ ಅಶೋಕ್ ಆರ್.ಎಚ್ ತಿಳಿಸಿದರು.

ಪಟ್ಟಣದ ಕೃಷಿ ಸಂಶೋಧನ ಕೇಂದ್ರದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಯ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಗಳು, ಸಂಸ್ಥೆಗಳು, ಸಮುದಾಯಗಳು ಮತ್ತು ವ್ಯಕ್ತಿಗಳು ಒಂದಾಗಲು, ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಲಾಗುತ್ತಿದೆ. ಭೂಮಿಯ ಮೇಲಿನ ಎಲ್ಲ ಜೀವಗಳ ಪರಸ್ಪರ ಸಂಬಂಧ ಮತ್ತು ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಸಾಮೂಹಿಕ ಕ್ರಿಯೆಯ ಮಹತ್ವ ಪಡೆದಿದೆ ಎಂದರು.

ಕೃಷಿ ಸಂಶೋಧನಾ ಕೇಂದ್ರದ ಮಣ್ಣು ವಿಜ್ಞಾನಿ ಡಿ.ಕೆ.ಡಾ.ಶ್ರೀನಿವಾಸ ಅವರಿಂದ ಭೂಮಿ ಹಾಗೂ ಕಾನೂನು ಅರಿವು-ನೆರವು ಕುರಿತು ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಎಚ್.ವಿಶ್ವನಾಥ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಉಪ್ಪಾರ ವೆಂಕೋಬ, ಸಹಾಯಕ ಸರ್ಕಾರಿ ಅಭಿಯೋಜಕ ಶಿವರಾಜ, ಪಿ.ಎಸ್.ಐ ಪರಶುರಾಮ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಶರೀಫ್ ಸಾಬ್, ಕಾರ್ಯದರ್ಶಿ ಎಂ.ಶಿವಕುಮಾರ್ ಹಾಗೂ ರೈತರು ಭಾಗವಹಿಸಿದ್ದರು.