ಬಸವಕಲ್ಯಾಣ: ಸಮಾಜದಲ್ಲಿನ ಜಾತೀಯತೆ ತೊಲಗಿಸಿ ಸಮಸಮಾಜ ನಿರ್ಮಾಣಕ್ಕಾಗಿ ಅನೇಕ ಶರಣರ ತಮ್ಮ ಪ್ರಾಣ ಬಲಿದಾನ ಅಪೂರ್ವವಾದದ್ದು, ತ್ಯಾಗ ಸ್ಮರಣೀಯ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ನಗರದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯಲ್ಲಿ ೨೦೨೫ರ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪೂಜ್ಯರು, ಶರಣರ ಬಲಿದಾನ ಕೇವಲ ಘಟನೆಯಲ್ಲ. ಬದಲು ಅವರು ಸಮಾಜಕ್ಕಾಗಿ ನೀಡಿದ ಒಟ್ಟು ಹೋರಾಟದ ಪ್ರತೀಕ ಎಂದರು.
ಸಮಾನತೆ, ತತ್ವ-ಸಿದ್ಧಾಂತಕ್ಕಾಗಿ ಹರಳಯ್ಯ ಮಧು-ವರಸರ ಹುತಾತ್ಮವಾದ ದಿನ ಲಿಂಗಾಯತರಿಗೆ ಅತ್ಯಂತ ಮಹತ್ವದ್ದು. ಬಸವ ನಾಡಿನಲ್ಲಿ ಶರಣರ ಕಾರ್ಯಕ್ರಮ ಮಾತ್ರ ನಡೆಯಬೇಕು. ಬಸವಣ್ಣನವರು ಅಖಂಡ ಸಮಾಜ ಜೋಡಿಸುವ ಕಾರ್ಯ ಮಾಡಿದ್ದರು. ತ್ರಿಪುರಾಂತ ಕೆರೆ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಜಗದ್ಗುರು ಸಿದ್ಧಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಕಾಯಕಭೂಮಿ ಆಗಿರುವ ಈ ನೆಲ ಪವಿತ್ರವಾದದ್ದು. ಈ ನೆಲದ ದರ್ಶನ ಪಡೆದರೆ ನಮ್ಮಲ್ಲಿ ಶಕ್ತಿ ಬರುತ್ತದೆ. ವಚನಗಳು ನಮ್ಮಲ್ಲಿ ಶಕ್ತಿ ತುಂಬುತ್ತವೆ. ಅವುಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸಿ ಜಗತ್ತಿನೆಲ್ಲೆಡೆ ಪ್ರಸಾರ ಮಾಡಬೇಕಿದೆ ಎಂದರು.
ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಕಾಯಕ ಧರ್ಮ, ವಿಶ್ವ ಬೆಳಗುವ ಧರ್ಮ. ಬಸವಣ್ಣನವರು ನಮ್ಮ ಧರ್ಮಗುರು, ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ. ಇಷ್ಟಲಿಂಗದ ಜನಕ ಬಸವಣ್ಣ. ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ಇದು ಬಸವಣ್ಣನವರ ನಾಡು. ಇಲ್ಲಿ ಬಸವಾದಿ ಶರಣರ ವಚನಗಳ, ತತ್ವಗಳ ಕಾರ್ಯಗಳು ನಡೆಯಬೇಕು. ಇಲ್ಲಿಂದ ಬಸವ ತತ್ವ ಇಡೀ ವಿಶ್ವಕ್ಕೆ ಮುಟ್ಟಿಸುವಂಥ ಕಾರ್ಯಗಳಾಗಬೇಕು ಎಂದರು.
ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿದರು. ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಿದರು. ಪಾಂಡೋಮಟ್ಟಿ ವೀರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಕೇರಳ ಬಸವ ಸಮಿತಿ ಅಧ್ಯಕ್ಷ ಕೆ. ಪ್ರಸನ್ನಕುಮಾರ ಮಾತನಾಡಿದರು. ಅಲ್ಲಮಗಿರಿ ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಅನಿಮಿಷಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಶಿವಾನಂದ ದೇವರು, ಡಾ.ವಿಜಯಶ್ರೀ ಬಶೆಟ್ಟಿ, ಡಾ.ಅಮರನಾಥ ಸೋಲಪುರೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ತೊಂಡಾರೆ, ಕಾವೇರಿ ಪಾಟೀಲ್, ಶಿವರಾಜ ನರಶೆಟ್ಟಿ, ವಿಶ್ವನಾಥ ಕಾಜಿ, ನಿರ್ಮಲಾ ಶಿವಣಕರ್, ಶಾಮಾ ರಗಟೆ, ಸುಲೋಚನಾ ಗುದಗೆ ಇತರರಿದ್ದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು.
ಭವ್ಯ ಮೆರವಣಿಗೆ: ನಗರದ ಐತಿಹಾಸಿಕ ಕೋಟೆ ಹತ್ತಿರ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಸಾನ್ನಿಧ್ಯದಲ್ಲಿ ಶಾಸಕ ಬಸವರಾಜ ಮತ್ತಿಮಡು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಸಿಪಿಐ ಅಲಿಸಾಬ್ ವಚನ ಪಠಿಸಿದರು. ಎಳೆಯ ಹೂಟೆಯ ಚಿತ್ರಗಳು, ಎತ್ತಿನ ಬಂಡಿಯಲ್ಲಿ ಶರಣರ ಫೋಟೋಗಳು, ಬಿಜ್ಜನಳ್ಳಿಯಲ್ಲಿರುವ ಹರಳಯ್ಯ ದಂಪತಿ ಪಾದುಕೆ, ಬಸವ ರಥ, ಕುದುರೆ ಒಂಟೆಗಳ ಮೇಲೆ ಶರಣ ವೇಷಧಾರಿಗಳು, ವಚನ ಭಜನೆ ತಂಡಗಳು, ಕೋಲಾಟ, ಡೊಳ್ಳು, ವಚನಗಳಿಗೆ ನೃತ್ಯ, ಪುರವಂತರ ಒಡಪುಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು. ಶಾಸಕ ಶರಣು ಸಲಗರ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಡಾ.ಜಿ.ಎಸ್. ಭುರಾಳೆ, ಸುಭಾಷ ಹೊಳಕುಂದೆ, ಅನೀಲಕುಮಾರ ರಗಟೆ, ರಾಜೇಂದ್ರಕುಮಾರ ಗಂದಗೆ, ರಾಜು ಕೋಟೆ, ಜಗನ್ನಾಥ ರಾಚೋಟಿ, ಶಿವರಾಜ ಶಾಶೆಟ್ಟೆ, ರವೀಂದ್ರ ಕೊಳಕೂರ, ಅಲ್ಲಮಪ್ರಭು ನಾವದಗೇರೆ, ಸುಭಾಷ ಹಮೀಲಾಪುರೆ, ಮಡಿವಾಳಯ್ಯ ಸ್ವಾಮಿ, ಆನಂದ ಪಾಟೀಲ್, ಶಿವಕುಮಾರ ಬಿರಾದಾರ, ಶಿವಕುಮಾರ ಶೆಟಕಾರ, ಲಿಂಗರಾಜ ಶಾಶೆಟ್ಟೆ, ಹಣಮಂತ ಧನಶೆಟ್ಟಿ, ಲಕ್ಷ್ಮೀಕಾಂತ ಜ್ಯಾಂತೆ, ಶಂಕರ ಕರಣೆ, ಶಿವರಾಜ ಬಾಲಕಿಲೆ, ನೀಲೇಶ ಖೂಬಾ, ಶಿವಕುಮಾರ ಕುದರೆ, ದತ್ತಾತ್ರೆ ರಾಘೊ, ರಾಜಶೇಖರ ಬಿರಾದಾರ್ ಇತರರಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಿತು. ನಂತರ ಹುತಾತ್ಮ ದಿನಾಚರಣೆಯಲ್ಲಿ ಪೂಜ್ಯ ಬಸವಪ್ರಭು ಸ್ವಾಮಿ ಸಾನ್ನಿಧ್ಯದಲ್ಲಿ ಸೋಮನಾಥ ಯಾಳವಾರ ಅನುಭಾವ ನೀಡಿದರು. ವೈಜಿನಾಥ ಕಾಮಶೆಟ್ಟಿ, ಶಿವರಾಜ ಶಾಶೆಟ್ಟೆ, ಶಂಕ್ರೆಪ್ಪ ಪಾಟೀಲ್, ನಾಗಯ್ಯ ಸ್ವಾಮಿ, ಪಂಡಿತ ನಾಗರಾಳೆ, ರಾಜಶ್ರೀ ಪಾಟೀಲ್, ಶರಣಬಸವ ಕಲ್ಲಾ, ಪ್ರದೀಪ್ ಬಿರಾದಾರ್, ದತ್ತಾತ್ರೇಯ ಬಾಂದೇಕರ್ ಇತರರಿದ್ದರು.
ಕಲ್ಯಾಣ ಕ್ರಾಂತಿಯಲ್ಲಿ ಅನೇಕ ಶರಣರು ಮಾನವೀಯ ತತ್ವಗಳಿಗಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಅವರಲ್ಲಿ ಹರಳಯ್ಯ ಮಧು ವರಸರ ಹೆಸರು ಮುಂಚೂಣಿಯಲ್ಲಿದೆ. ತ್ಯಾಗ-ಬಲಿದಾನದ ಭೂಮಿ ಬಸವಕಲ್ಯಾಣ. ಹುತಾತ್ಮ ಶರಣರ ಸ್ಮರಣೆಯನ್ನು ಹೃದಯತುಂಬಿ ಮಾಡಿ ಕಲ್ಯಾಣ ಕ್ರಾಂತಿ ತತ್ವಗಳನ್ನು ಮನ-ಮನಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ.
| ಪೂಜ್ಯ ಡಾ.ಗಂಗಾಂಬಿಕೆ ಅಕ್ಕ
ಯುವ ಸಮುದಾಯಕ್ಕೆ ಸನ್ಮಾರ್ಗ ತೋರುವ ಕಾರ್ಯ ಮಠಾಧೀಶರಿಂದ ನಡೆಯುತ್ತಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕಾಯಕಕ್ಕೆ ಆದ್ಯತೆ ನೀಡಬೇಕು. ನಿತ್ಯ ಇಷ್ಟಲಿಂಗ ಪೂಜೆ, ವಚನ ಅಧ್ಯಯನ ಮಾಡಬೇಕು. ಶಾಂತಿ, ನೆಮ್ಮದಿ ಬದುಕಿಗೆ ಬಸವ ತತ್ವ ಅರಿತು ಆಚರಣೆಗೆ ತರಲು ಪ್ರಯತ್ನಿಸಬೇಕು.
| ಸಾಗರ್ ಖಂಡ್ರೆ ಸಂಸದ