ಪಿರಿಯಾಪಟ್ಟಣ: ಕಲುಷಿತ ಸಮಾಜವನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ ಎಂದು ಶಿಕ್ಷಕ ಎನ್.ಆರ್.ಕಾಂತರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದ್ರಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇರಳದಲ್ಲಿ ಜಾತೀಯತೆ ತುಂಬಿ ತುಳುಕುತಿದ್ದ ಕಾಲದಲ್ಲಿ ನಾರಾಯಣ ಗುರುಗಳು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೋಷಿತರನ್ನು ರಕ್ಷಿಸುವ ಮತ್ತು ಅವರಲ್ಲಿ ಧೈರ್ಯ ತುಂಬು ಕೆಲಸ ಮಾಡಿದ್ದರು ಎಂದರು.
ಹಿಂದುಳಿದ ವರ್ಗದ ಜನರಿಗೆ ದೇವಾಲಯದ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಖುದ್ದು ಶಿವ ದೇವಾಲಯವನ್ನು ನಿರ್ಮಿಸುವ ಮೂಲಕ ದೇವಾಲಯಗಳನ್ನು ಗ್ರಂಥಾಲಯಗಳನ್ನಾಗಿ ಮಾಡಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಶಿಕ್ಷಣಕ್ಕಾಗಿ ಸ್ವತಂತ್ರರಾಗಿ ಸಂಘಟಿತರಾಗಿ ಬಲಿಷ್ಠರಾಗಿ ಎಂದು ಹೇಳುವ ಮೂಲಕ ತಳ ಸಮುದಾಯದ ಜನರನ್ನು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವಂತೆ ಹುರಿದುಂಬಿಸಿದರು ಎಂದು ತಿಳಿಸಿದರು.
ತಹಸೀಲ್ದಾರ್ ಕುಂಞ ಅಹಮ್ಮದ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಕೆಳ ವರ್ಗದ ಜನರಿಗಾಗಿ ವಾಚನಾಲಯ, ದೇವಾಲಯ ಮತ್ತು ಶಾಲೆಗಳನ್ನು ಕಟ್ಟಬೇಕು. ನಾವೆಲ್ಲ ಶಿಕ್ಷಣವಂತರಾಗಬೇಕು ಎಂದು ಕರೆ ನೀಡುತ್ತಿದ್ದರು. ಅಂದಿನ ಅವರ ಪರಿಶ್ರಮದ ಫಲವೇ ಇಂದು ಇಡೀ ಕೇರಳ ರಾಜ್ಯ ಶೈಕ್ಷಣಿಕವಾಗಿ ದೇಶದಲ್ಲಿಯೇ ಮುಂದಿದೆ ಎಂದರು. ನಾರಾಯಣ ಗುರು ಅವರನ್ನು ಕೇರಳದ ಬಸವಣ್ಣ ಎಂದು ಸಂಬೋಧಿಸಲಾಗುತ್ತಿದೆ ಎಂದರು.
ಕಾಯಕನಿಷ್ಠೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದ ಶಿವಶರಣ ನುಲಿಯ ಚಂದಯ್ಯ ಕಾಯಕದ ಮೂಲಕವೇ ಆತ್ಮೋನ್ನತಿ ಕಂಡವರು ಎಂದು ಹೇಳಿದರು.
ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಿ.ವೈ.ಮಲ್ಲೇಶ್, ಉಪಾಧ್ಯಕ್ಷ ಸಿ.ಎನ್.ನಾರಾಯಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸಣ್ಣಸ್ವಾಮಿ, ಸರ್ವೇ ಇಲಾಖೆಯ ಎಂ.ಕೆ.ಪ್ರಕಾಶ್, ಮುಖಂಡರಾದ ಪಿ.ಮಹದೇವ್, ತಿಮ್ಮಪ್ಪ, ಪಾಪಣ್ಣ, ಕೆಂಪರಾಜು, ಅಕ್ಷಯ ಕಾಂತರಾಜ್, ಗಿರೀಶ್, ಪಿ.ಎಂ.ಗಿರೀಶ್, ಕೆ.ಕೆ.ಶಶಿ, ಪಿ.ಪಿ.ಮಹದೇವ್, ಬಾಲಾಜಿ ಮಹೇಶ್, ಸೇರಿದಂತೆ ಆರ್ಯ ಈಡಿಗರ ಸಂಘದ ಮುಖಂಡರು ಇದ್ದರು.