ಚಾಮರಾಜನಗರ: ಸಾಮಾಜಿಕ ತಾರತಮ್ಯ, ಅಸ್ಪಶ್ಯತೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಸರಳ ವಚನಗಳನ್ನು ರಚಿಸಿ ಜನಜಾಗೃತಿ ಮೂಡಿಸಿದ ಶಿವಶರಣರಲ್ಲಿ ಹಡಪದ ಅಪ್ಪಣ್ಣ ಪ್ರಮುಖರಾಗಿದ್ದಾರೆ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಶರಣ ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿ ಸರಳ ವಚನಗಳನ್ನು ರಚಿಸಿ ಅಸ್ಪಶ್ಯತೆ ವಿರುದ್ದ ಹೋರಾಡಿ ಸಮಸಮಾಜ ನಿರ್ಮಾಣ ಕಾರ್ಯದಲ್ಲಿ ಬಸವಣ್ಣನವರೊಂದಿಗೆ ದುಡಿದವರು. ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ 250 ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಸರಳ, ಮಿತಭಾಷಿ, ಸಜ್ಜನಿಕೆಯ ಮೇರುವ್ಯಕ್ತಿತ್ವದ ಹಡಪದ ಅಪ್ಪಣ್ಣ ಅವರನ್ನು ಸ್ಮರಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿ, 12ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಹಡಪದ ಅಪ್ಪಣ್ಣ ಅವರು ಅಗ್ರಗಣ್ಯರಾಗಿದ್ದಾರೆ. 12ನೇ ಶತಮಾನವು ಇಡೀ ಜಗತ್ತಿನಲ್ಲಿಯೇ ಧಾರ್ಮಿಕ, ಪ್ರಗತಿಪರ, ಆಧ್ಯಾತ್ಮಿಕ ಹಾಗೂ ವೈಚಾರಿಕಾ ಕ್ರಾಂತಿ ಹುಟ್ಟುಹಾಕಿ ನವಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿತು. ಸಮಾನ ಮನಸ್ಕ ಶಿವಶರಣರು ಅನುಭವ ಮಂಟಪ ಕಟ್ಟಿ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವ ಕೆಲಸ ಮಾಡಿದರು ಎಂದು ತಿಳಿಸಿದರು.
ಜಾತೀಯತೆ, ಅಸ್ಪಶ್ಯತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ನಿಜವಾದ ಪ್ರಜಾಪ್ರಭುತ್ವ ಸೃಷ್ಠಿಯಾದದ್ದು 12ನೇ ಶತಮಾನದಲ್ಲಿ. ಜನರಿಗೆ ಅರ್ಥವಾಗುವ ಸರಳ ವಚನಗಳ ಮೂಲಕ ಜಾತಿಪದ್ದತಿ ನಿರ್ಮೂಲನೆಗೆ ಮಾನವೀಯ ನೆಲೆಗಟ್ಟಿನಲ್ಲಿ ಭದ್ರಬುನಾದಿ ಹಾಕಲು ಹಡಪದ ಅಪ್ಪಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯ ವ್ಯಕ್ತಿಗಳನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ಮಕ್ಕಳಿಗೆ ಸ್ಮರಣಿಕೆಯೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವೆಂಕಟರಾಜು, ತಾಲೂಕು ಅಧ್ಯಕ್ಷರಾದ ಬಸವಣ್ಣ, ವಿಠಲ, ಶ್ರೀಕಂಠಸ್ವಾಮಿ, ರಾಚಪ್ಪಾಜಿ, ಮಹಿಳಾ ಘಟಕದ ಅಧ್ಯಕ್ಷೆ ದೊಡ್ಡತಾಯಮ್ಮ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
250 ವಚನಗಳ ರಚನೆ:
ಸಮಾಜವನ್ನು ವಿಡಂಬನಾತ್ಮಕವಾಗಿ ತಿದ್ದುವಂತಹ 250 ವಚನಗಳನ್ನು ರಚಿಸುವ ಮೂಲಕ ವಚನ ಚಳವಳಿ ಹುಟ್ಟುಹಾಕಿದ ಪ್ರಮುಖರಲ್ಲಿ ಹಡಪದ ಅಪ್ಪಣ್ಣ ಅವರು ಸಹ ಒಬ್ಬರಾಗಿದ್ದಾರೆ ಎಂದು ಪ್ರಗತಿಪರ ವಿಚಾರವಾದಿ ಅರಕಲವಾಡಿ ನಾಗೇಂದ್ರ ಹೇಳಿದರು. ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಜನರು ಬಸವಣ್ಣನವರ ಜೊತೆಗಿದ್ದರು. ಆದರೆ ಹಡಪದ ಅಪ್ಪಣ್ಣ ಅವರು ಬಸವಣ್ಣನವರಿಗೆ ಅಂತಿಮ ಕಾಲದವರೆಗೂ ಜೊತೆಯಾಗಿದ್ದರು. ಅನುಭವ ಮಂಟಪಕ್ಕೆ ಯಾರೇ ಆಗಮಿಸಿದರೂ ಮೊದಲು ಕೆಳಸ್ತರದ ಸಮುದಾಯಕ್ಕೆ ಸೇರಿದ ಹಡಪದ ಅಪ್ಪಣ್ಣ ಅವರನ್ನು ನೋಡಿ, ಮಾತನಾಡಿಸಿಕೊಂಡು ಬಳಿಕ ಬಸವಣ್ಣನವರನ್ನು ಭೇಟಿಯಾಗುವ ಷರತ್ತು ಇತ್ತು. ಇದು ಬಸವಣ್ಣನವರ ಸಮಸಮಾಜದ ಉತ್ತಮ ಸಂದೇಶವಾಗಿದೆ ಎಂದರು.
ಬಸವಣ್ಣನವರು ಹಡಪದ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡದ್ದಕ್ಕೆ ಅಪ್ಪಣ್ಣ ಎಂಬ ಹೆಸರು ಬಂದಿತು. ಅನುಭವ ಮಂಟಪದಲ್ಲಿ 770 ಗಣಗಳು ಹಾಗೂ 196000 ಮಂದಿ ಶಿವಶರಣರಿದ್ದರು. ಅಷ್ಟೂ ಶಿವಶರಣರಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ಮಾತ್ರ ತಮ್ಮ ತೆಗೆ ಇರಿಸಿಕೊಂಡಿದ್ದರು. ವಚನಗಳಲ್ಲಿ ಬದುಕಿದೆ, ಭವಿಷ್ಯವಿದೆ, ಸಂಸ್ಕಾರವಿದೆ. ಆ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ, ಮುಂದಿನ ತಲೆಮಾರಿಗೆ ತಿಳಿಸಿಕೊಡಬೇಕಾಗಿದೆ. ಸಮುದಾಯದ ವೃತ್ತಿ ಶ್ರೇಷ್ಠವಾದದ್ದೆ. ಆದರೇ ಮಕ್ಕಳು ಅದನ್ನೇ ಮುಂದುವರಿಸದೇ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದು ಗೌರವಯುತ ಜೀವನ ಕಟ್ಟಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.