ಜಿಲ್ಲೆ

ಸಮರ್ಪಕ ವಿದ್ಯುತ್‌ಗೆ ಪೋರೈಕೆಗೆ ರೈತರ ಆಗ್ರಹ

ಆಲೂರು: ಸರಿಯಾಗಿ ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಬಿ.ಧರ್ಮರಾಜ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಆಲೂರು ಪಟ್ಟಣದ ಚೆಸ್ಕಾಂ ಕಚೇರಿಯ ಮುಂದೆ ಜಮಾಯಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘಟನೆ ಹಸಿರು ಸೇನೆ ಸಂಘಟನೆಯ ರೈತರು, ಶಾಸಕ ಸಿಮೆಂಟ್ ಮಂಜು ಹಾಗೂ ಚೆಸ್ಕಾಂ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರೈತ ಸಂಘಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಬಿ.ಧರ್ಮರಾಜು ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ವಿದ್ಯುತ್ ಅಭಾವ ಮಿತಿ ಮೀರಿದೆ. ಶಾಸಕ ಸಿಮೆಂಟ್ ಮಂಜು ಶಾಸಕರಾಗಿ ಎರಡು ವರ್ಷ ಕಳೆದಿವೆ. ಆಲೂರಿನ ಸಮಸ್ಯೆ ಬಗ್ಗೆ ಒಂದೇ ಒಂದು ಧ್ವನಿ ಎತ್ತುತ್ತಿಲ್ಲ. ಆಲೂರಿನ ಜನತೆ ಬಗ್ಗೆ ತತ್ಸಾರ ಮನೋಭಾವನೆ ಹೊಂದಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಕೇವಲ ಸಕಲೇಶಪುರ ಜನರ ಬಗ್ಗೆ ಮಾತನಾಡುತ್ತಾರೆ. ಶಾಸಕರು ಇಬ್ಬಂದಿತನ ಒಳ್ಳೆಯದಲ್ಲ.

ಇದುವರೆಗೂ ಬಗರ್ ಹುಕುಂ ಸಭೆ ನಡೆಸಿ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಶಾಸಕರಾಗುವ ಮೊದಲು ಆಲೂರು ತಾಲೂಕಿನಲ್ಲಿ ಎರಡು ಎಂಯುಎಸ್‌ಎಸ್ ತಂದು ರೈತರಿಗಾಗುತ್ತಿರುವ ವಿದ್ಯುತ್ ಸಮಸ್ಯೆ ಬಗೆ ಹರಿಸುತ್ತೇನೆಂದು ಹೇಳಿದ್ದರು. ಆದರೆ ಇದುವರೆಗೂ ಒಂದೇ ಒಂದು ಮಾತನಾಡಿಲ್ಲ. ರೈತರು ಸಾಲ ಮಾಡಿ ಬೆಳೆ ಮಾಡಿದ್ದಾರೆ. ರೈತರು ಬೆಳೆ ಉಳಿಸಿಕೊಳ್ಳಲು ತುಂಬಾ ಸರ್ಕಸ್ ಮಾಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಟ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಬೆಳೆ ನಾಶವಾಗಿದೆ. ಶಾಸಕರು ಇತ್ತ ಗಮನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ.ಪಂ. ಮಾಜಿ ಅಧ್ಯಕ್ಷ ನಂದೀಶ್ ಮಾತನಾಡಿ, ಸಮರ್ಪಕ ವಿದ್ಯುತ್ ನೀಡದ ಹಿನ್ನೆಲೆಯಲ್ಲಿ ರೈತರು ಬೆಳೆದ ಬೇಸಿಗೆ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಹಲವಾರು ಬಾರಿ ಸೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಾಸಕ ಸಿಮೆಂಟ್ ಮಂಜು ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಮತ ನೀಡಿದ ಆಲೂರಿನ ಜನರನ್ನು ಮರೆತಿದ್ದಾರೆ. ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳ ಜತೆ ಚರ್ಚಿಸಿ ಇಂದಿನಿಂದ ಸಮರ್ಪಕ ವಿದ್ಯುತ್ ನೀಡಬೇಕು ಇಲ್ಲದಿದ್ದರೆ ನಿರಂತರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಮಂಚೇನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಸಂತೋಷ್, ಮಲ್ಲೇಶ್ ಬೈರಾಪುರ, ಹರೀಶ್ ಕಣಗಾಲ್, ಮಲ್ಲಿಕಾರ್ಜುನ್, ಎಚ್. ಬಿ.ಮಂಜುನಾಥ್, ವಿಜಯಕುಮಾರ್, ಜಗದೀಶ್ ಕಣಗಾಲ್, ಮಂಜುನಾಥ್ ಇತರರಿದ್ದರು.