ಜಿಲ್ಲೆ

ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಸೆಸ್ಕ್ ಕಚೇರಿಗೆ ರೈತರ ಮುತ್ತಿಗೆ

ಗುಂಡ್ಲುಪೇಟೆ: ಸರ್ಕಾರ ನಿಗದಿಸಿದ ಪ್ರಮಾಣದಲ್ಲಿ ತ್ರೀಫೇಸ್ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಬೊಮ್ಮಲಾಪುರ ಸುತ್ತಮುತ್ತಲಿನ ರೈತರು ಶುಕ್ರವಾರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.


ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಏಳು ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಪೂರೈಸುವಂತೆ ಸೂಚಿಸಿದ್ದರೂ ಬೊಮ್ಮಲಾಪುರ ವಿದ್ಯುತ್ ವಿತರಣಾ ಕೇಂದ್ರದ ಅಧಿಕಾರಿಗಳು ಅದನ್ನು ಪಾಲಿಸದೆ ಒಂದು ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಜತೆಗೆ ಜಮೀನುಗಳಲ್ಲಿ ಮನೆ ಮಾಡಿಕೊಂಡಿರುವ ರೈತರಿಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಈ ಬಗ್ಗೆ ಕೇಳಿದರೆ ಸಂಬಂಧಪಟ್ಟ ಇಂಜಿನಿಯರ್ ನಿರ್ಲಕ್ಷೃದ ಉತ್ತರ ನೀಡುತ್ತಾರೆ. ಅಧಿಕಾರಿಗಳ ಮೊಬೈಲ್‌ಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಗುರುವಾರ ಸಂಜೆ ಕಚೇರಿಗೆ ಮುತ್ತಿಗೆ ಹಾಕಿದ್ದಾಗ ಶುಕ್ರವಾರದಿಂದ ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಅದು ಪಾಲನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ವೇಳೆ ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಉಪವಿಭಾಗದ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಬೇಗೂರು ಉಪವಿಭಾಗದ ಎಇಇ ರಾಮಚಂದ್ರರಾವ್ ಸೆಸ್ಕ್ ನಿರ್ದೇಶನದಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರೂ ಒಪ್ಪದ ಪ್ರತಿಭಟನಾಕಾರರು, ಬೊಮ್ಮಲಾಪುರ ವಿತರಣಾ ಕೇಂದ್ರದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿ, ಸ್ಥಳಕ್ಕೆ ಸೆಸ್ಕ್‌ನ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ಮಧ್ಯಾಹ್ನ ಸ್ಥಳದಲ್ಲಿಯೇ ಆಹಾರ ತಯಾರಿಸಿ ಊಟ ಮಾಡಿದರು.


ಸಂತೆಮರಹಳ್ಳಿಯಲ್ಲಿಯೂ ರೈತರ ಪ್ರತಿಭಟನೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಅಲ್ಲಿಯೇ ಇದ್ದಾರೆ. ಅಲ್ಲಿ ಏನು ತೀರ್ಮಾನ ಕೈಗೊಳ್ಳಲಾಗುತ್ತದೋ ಅದೇ ಇಲ್ಲಿಗೂ ಅನ್ವಯಿಸುವುದರಿಂದ ಅಲ್ಲಿಯವರೆಗೆ ಕಾಯುತ್ತಿದ್ದೇವೆ ಎಂದು ಪ್ರತಿಭಟನಾಕಾರರು ವಿಜಯವಾಣಿಗೆ ತಿಳಿಸಿದರು. ಪ್ರತಿಭಟನೆಯಲ್ಲಿ ನಾಗಾರ್ಜುನ ಕುಮಾರ್, ಕುಂದಕೆರೆ ಸಂಪತ್ತು, ಬಾಚಹಳ್ಳಿ ಮಹೇಶ್, ಶೆಟ್ಟಹಳ್ಳಿ ಸತೀಶ್, ಸಿದ್ದಲಿಂಗಪ್ಪ ಇತರರು ಪಾಲ್ಗೊಂಡಿದ್ದರು.