ಮದ್ದೂರು: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಚೇರಿಗೆ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ 7 ಗಂಟೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು, ಪಂಪ್‌ಸೆಟ್ ಬಳಕೆದಾರರ ಆಧಾರ್ ಜೋಡಣೆ ಕ್ರಮ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಲೂಕಿನ 40 ಗ್ರಾಮಗಳಲ್ಲಿನ ಹಳೆ ಬಾಕಿಯನ್ನು ವಿದ್ಯುತ್ ಶುಲ್ಕಕ್ಕೆ ಸೇರಿಸಿ ಮನ್ನಾ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಸ್ಲಾೃಬ್ ಪದ್ಧತಿಯನ್ನು ವಾಪಸ್ ಪಡೆಯಬೇಕು, ಬಾಕಿ ಮೊತ್ತ ಇರುವ ಬಳಕೆದಾರರ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು. ರೈತರ ಬೇಡಿಕೆಗಳನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.
ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ತಾಲೂಕು ಅಧ್ಯಕ್ಷ ಜಿ.ಕೆ. ರಾಮಕೃಷ್ಣ, ತಾಲೂಕು ಕಾರ್ಯದರ್ಶಿ ಟಿ.ಎಲ್. ವಿನೋದ್‌ಬಾಬು, ಮುಖಂಡರಾದ ವರದರಾಜು, ಗೊಲ್ಲರದೊಡ್ಡಿ ಅಶೋಕ, ಶೆಟ್ಟಹಳ್ಳಿ ರವಿಕುಮಾರ್, ದಯಾನಂದ, ಜಿ.ಎ. ಶಂಕರ್, ಎಸ್.ಬಿ. ಪುಟ್ಟಲಿಂಗಯ್ಯ, ಎಂ.ಎಸ್. ಸಿದ್ದೇಗೌಡ, ಜಗದೀಶ್ ಸೇರಿದಂತೆ ಇತರರು ಇದ್ದರು.