ಹನೂರು: ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಗುರುವಾರ ತಾಲೂಕಿನ ಮಾರ್ಟಳ್ಳಿ ಭಾಗದ ರೈತರು ಸುಳ್ವಾಡಿ ಗ್ರಾಮದ ಸೆಸ್ಕ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ಮಾರ್ಟಳ್ಳಿ ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ. ಇತ್ತ ರಸಗೊಬ್ಬರದ ಬೆಲೆ ಗಗನಕ್ಕೇರಿದೆ. ಬೆಳೆಗಳಿಗೆ ನಿಗದಿತ ಬೆಲೆ ಸಿಗುತ್ತಿಲ್ಲ. ಇದರಿಂದ ಕೃಷಿಯಲ್ಲಿ ತುಂಬಾ ತೊಂದರೆಯನ್ನು ಎದುರಿಸುತ್ತಿದ್ದೇವೆ. ಈತನ್ಮಧ್ಯೆ ಕಳೆದ ಒಂದು ವಾರದಿಂದ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪರಿಣಾಮ ಫಸಲುಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆ ಸಂಬಂಧ ಸಿಬ್ಬಂದಿಗಳನ್ನು ಪ್ರಶ್ನಿಸಿದರೆ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತ್ರಿಫೇಸ್ ಹಾಗೂ ಸಂಜೆ 6ರಿಂದ ಬೆಳಗ್ಗೆ 6ರವರೆಗೆ 2 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿ ತಿಳಿದು ಸೆಸ್ಕ್ ಜೆಇ ರಂಗಸ್ವಾಮಿ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಮನವಿಯನ್ನು ಆಲಿಸಿ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು. ಬೆಳಗ್ಗೆ ವೇಳೆ ವಿದ್ಯುತ್ ಪೂರೈಕೆ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ರೈತ ಮುಖಂಡರಾದ ಅರ್ಪುದರಾಜ್, ಗೋಪಾಲ್, ಆರೋಗ್ಯರಾಜ್, ಜಪಮಾಲೆ, ಆರೋಗ್ಯಸ್ವಾಮಿ, ಅಂತೀಸ್, ಅಂತೋಣಿಸ್ವಾಮಿ, ಡೇವಿಡ್, ಸಗಯ್‌ರಾಜ್ ಪ್ಯಾಕಿಯಮ್ಮಾಳ್, ಗುರುವಾಯಿ, ಜಯಮೇರಿ, ಈಶ್ವರಿ ಹಾಗೂ ಇನ್ನಿತರರು ಭಾಗವಹಿಸಿದ್ದರು.