ಜಿಲ್ಲೆ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಮುಂಡರಗಿ: ನೀರಾವರಿ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಬರದೂರ, ಮೇವುಂಡಿ ಮೊದಲಾದ ಗ್ರಾಮದ ರೈತರು ಸೋಮವಾರ ಸ್ಥಳೀಯ ವಿದ್ಯುತ್ ಪ್ರಸರಣ ಘಟಕ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನೀರಾವರಿ ಪಂಪ್​ಸೆಟ್​ಗಳಿಗೆ ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಒಂದು ದಿನ ಬೆಳಗಿನ ಜಾವ 2 ಗಂಟೆಗೆ ವಿದ್ಯುತ್ ಪೂರೈಸಿದರೆ ಮತ್ತೊಂದು ದಿನ ಸಂಜೆ ನಾಲ್ಕು ಗಂಟೆಗೆ ಇಲ್ಲವೆ, ರಾತ್ರಿ 7 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಹಲವು ಬಾರಿ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ನೀರಾವರಿ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ನಿಷ್ಕಾಳಜಿ ತೋರಲಾಗುತ್ತಿದೆ. ಸಮರ್ಪಕವಾಗಿ ಪೂರೈಸುತ್ತೇವೆ ಎಂದು ಹೇಳಿದ್ದ ಅಧಿಕಾರಿಗಳು ಭರವಸೆ ಈಡೇರಿಸಲಿಲ್ಲ. ತಮಗೆ ತಿಳಿದಂತೆ ವಿದ್ಯುತ್ ಪೂರೈಸಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವಿಠ್ಠಲ ಗಣಾಚಾರಿ ಮಾತನಾಡಿ, ನಿತ್ಯ ರೈತರ ಪಂಪ್​ಸೆಟ್​ಗಳಿಗೆ ಬೆಳಗ್ಗೆ 8ರಿಂದ 12 ಗಂಟೆಯವರೆಗೆ ಹಾಗೂ ರಾತ್ರಿ 10 ಗಂಟೆಯಿಂದ 1 ಗಂಟೆಯವರೆಗೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಪಾಂಡುರಂಗ ತಳವಾರ, ವಿದ್ಯುತ್ ಪೂರೈಕೆಯಲ್ಲಿ ಕಾರಣಾಂತರದಿಂದ ತೊಂದರೆಯಾಗಿದೆ. ಸಮಸ್ಯೆ ನಿವಾರಿಸುವ ಕೆಲಸ ಮಾಡುತ್ತೇವೆ. ರೈತರ ಜಮೀನುಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುವುದು ಎಂದ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ರಾಮಣ್ಣ ಇಲ್ಲೂರ, ಅಂದಪ್ಪ ಕುರಿ, ಕೃಷ್ಣಾ ಗಡಾದ, ಕನಕಪ್ಪ ಕುರಿ, ಶರಣಪ್ಪ ಕಂಬಳಿ, ಹನುಮಂತ್ಪಪ್ಪ ಕುರಿ, ಬೀರಪ್ಪ ಮಲ್ಲಾರ್ಜಿ, ರಾಘವೇಂದ್ರ ಕುರಿ, ಚಂದ್ರಶೇಖರ ರಾಟಿ, ಶಿದಪ್ಪ ಲಕ್ಕುಂಡಿ, ವೆಂಕಟೇಶ ಬಂಡೆಣ್ಣವರ, ಲಕ್ಷ್ಮಪ್ಪ ಕುರಿ, ಪರಸಪ್ಪ ಲದ್ದಿ, ಅಜ್ಜಪ್ಪ ಹಿರೇಮಠ, ಈರಣ್ಣ ಗಾರವಾಳ, ನಾಗರಾಜ ನಾಡಗೌಡ್ರ, ಶಾಂತಕುಮಾರ ಗಡಾದ, ಹುಸೇನಸಾಬ್ ಕುರಿ, ಶ್ರೀಕಾಂತ ನಾಡಗೌಡ್ರ, ಕೆಂಚನಗೌಡ ಹಿರೇಗೌಡ್ರ, ಶಿವಲಿಂಗಪ್ಪ ಶಿರೋಳ ಮತ್ತಿತರರು ಇದ್ದರು.