ಜಿಲ್ಲೆ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಚಿತ್ರದುರ್ಗ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ನಗರದ ಬೆಸ್ಕಾಂ ಇಲಾಖೆಯ ಮುಖ್ಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕು, ಕಸಬಾ ಹೋಬಳಿ, ಗೋನೂರು, ಹಂಪಯ್ಯನಮಾಳಿಗೆ, ಬೊಮ್ಮನಹಳ್ಳಿ, ಬಚ್ಚಬೋರನಹಟ್ಟಿ, ಸಾಸಲಹಟ್ಟಿ, ಕಲ್ಲೇನಹಳ್ಳಿ ಸೇರಿ 10ಕ್ಕೂ ಅಧಿಕ ಗ್ರಾಮಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದರು.

ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್ ಪೂರೈಸಲು ಆದೇಶಿಸಿದೆ. ಆದರೆ, ಈ ಗ್ರಾಮಗಳಲ್ಲಿ ನಾಲ್ಕೈದು ತಾಸು ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ. ವಿದ್ಯುತ್ ಬಂದ 3 ಗಂಟೆಯಲ್ಲಿ ಹತ್ತನೆರಡು ಬಾರಿ ಟ್ರಿಪ್ ಆಗುತ್ತದೆ. ಇದನ್ನು ಸೆಕ್ಷನ್ ಆಫೀಸರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ವೇಳೆಯಲ್ಲೂ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಈ ಭಾಗಗಳ ರೈತರು ತಮ್ಮ ಜಮೀನುಗಳಲ್ಲಿ ಹೂ, ಸೊಪ್ಪು, ತರಕಾರಿ ಬೆಳೆಯುವುದು ಸಾಮಾನ್ಯ. ಆದರೆ, ವಿದ್ಯುತ್ ಕೊರತೆಯಿಂದಾಗಿ ಬೆಳೆಗಳೆಲ್ಲ ಒಣಗುತ್ತಿವೆ. ಸರ್ಕಾರದ ಆದೇಶದಂತೆ 7 ತಾಸು ಪೂರೈಸಲು ಕ್ರಮವಹಿಸಬೇಕು ಎಂದು ಕೋರಿದರು.

ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ವಿಶ್ವನಾಥ್ ಶೆಟ್ಟಿ, ಕೃಷ್ಣಮೂರ್ತಿ, ಮಂಜುನಾಥ್ ರೆಡ್ಡಿ, ಲಕ್ಷ್ಮಣ್, ವೆಂಕಟೇಶ್, ಬಸವರಾಜು, ಚಿದಾನಂದ, ಸಂಪತ್‌ಕುಮಾರ್, ಉಮೇಶ್, ಮೂಡಲಗಿರಿಯಪ್ಪ, ರಾಮಣ್ಣ ಇತರರಿದ್ದರು.