ಗುಂಡ್ಲುಪೇಟೆ: ಇತ್ತೀಚೆಗೆ ಅನಿಯಮಿತ ವಿದ್ಯುತ್ ಕಡಿತ ಹಾಗೂ ರಾತ್ರಿ ವೇಳೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಪಂಪ್‌ಸೆಟ್ ಹೊಂದಿರುವ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕೂಡಲೇ ಸೆಸ್ಕ್ ಹಿಂದಿನಂತೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಎಂದು ರೈತ ಮುಖಂಡ ಹಂಗಳ ಮಾಧು ಒತ್ತಾಯಿಸಿದ್ದಾರೆ.
ಈಗಾಗಲೇ ತಾಲೂಕಿಗೆ ಸಮರ್ಪಕ ಮಳೆ ಬೀಳದೆ ರೈತರು ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಮುರಟಿಹೋಗಿವೆ. ಇತ್ತೀಚೆಗೆ ಸ್ವಲ್ಪ ಮಳೆ ಬಿದ್ದ ನಂತರ ನೀರಾವರಿ ಜಮೀನುಗಳನ್ನು ಹೊಂದಿರುವ ರೈತರು ತಮ್ಮ ಜಮೀನುಗಳಲ್ಲಿ ಬೆಳ್ಳುಳ್ಳಿ, ಅರಿಶಿಣ ಹಾಗೂ ಸಣ್ಣ ಈರುಳ್ಳಿ ಬಿತ್ತನೆ ಮಾಡಲು ಆರಂಭಿಸಿದ್ದಾರೆ. ಯಾವುದೇ ಸೂಚನೆ ನೀಡದೆ ಸೆಸ್ಕ್ ರಾತ್ರಿ ವೇಳೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದೆ ಎಂದು ದೂರಿದ್ದಾರೆ.
ಈ ಬಗ್ಗೆ ವಿಚಾರಿಸಿದರೆ ಟಿಸಿ ಸಮಸ್ಯೆಯಿಂದ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ವಿದ್ಯುತ್ ಸರಬರಾಜಿನ ಸಮಯ ಬದಲಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದ ರೈತರು ತಮ್ಮ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದಂತಾಗಿದೆ. ಹಗಲಿನಲ್ಲಿ ಸುಡುವ ಬಿರು ಬಿಸಿಲಿಗೆ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು ಸಾವಿರಾರು ರೂ. ತೆತ್ತು ಖರೀದಿಸಿದ ಬಿತ್ತನೆ ಬೀಜಗಳು ನಾಶವಾಗುವ ಭೀತಿ ಎದುರಾಗಿದೆ.
ಇನ್ನಾದರೂ ಸೆಸ್ಕ್ ಅಧಿಕಾರಿಗಳು ಪಂಪ್‌ಸೆಟ್‌ಗಳಿಗೆ ಹಿಂದಿನಂತೆ ವಿದ್ಯುತ್ ಸರಬರಾಜು ಮಾಡಬೇಕು. ಅಕಸ್ಮಾತ್ ಸಣ್ಣಪುಟ್ಟ ಬದಲಾವಣೆಗಳಿದ್ದರೆ ಮುಂಚಿತವಾಗಿ ತಿಳಿಸಬೇಕು. ಇಲ್ಲದಿದ್ದರೆ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.