ಹನೂರು: ತಾಲೂಕಿನ ಚಿಂಚಳ್ಳಿ ಭಾಗದ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರು ಶನಿವಾರ ಪಟ್ಟಣದ ಸೆಸ್ಕ್ ಕಚೇರಿಗೆ ಆಗಮಿಸಿ ಸಹಾಯಕ ಇಂಜಿನಿಯರ್ ಆನಂದ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತರು ಮಾತನಾಡಿ, ಚಿಂಚಳ್ಳಿ, ಎಡಹಳ್ಳಿ ದೊಡ್ಡಿ, ಅಲಗುಮೂಲೆ ಹಾಗೂ ಹುಲ್ಲೇಪುರ ಭಾಗದಲ್ಲಿ ಬಹುತೇಕ ರೈತರು ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡು ಜೀವನ ನಡೆಸಲಾಗುತ್ತಿದೆ. ಆದರೆ ಕಳೆದ 5 ದಿನಗಳಿಂದ ತೋಟದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ಅಗತ್ಯಕ್ಕೆ ಅನುಗುಣವಾಗಿ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಫಸಲುಗಳು ಒಣಗುತ್ತಿದ್ದು, ನಷ್ಟದ ಆತಂಕ ಎದುರಾಗಿದೆ. ಫಸಲು ನಾಶವಾದರೆ ಯಾರು ಹೊಣೆ? ಅಲ್ಲದೆ ಇದೀಗ ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳ ಓದಿಗೆ ತೊಡಕಾಗಿ ಪರಿಣಮಿಸಿದೆ.
ರಾತ್ರಿಯನ್ನು ಕತ್ತಲೆಯಲ್ಲೇ ಕಳೆಯುವಂತಾಗಿದ್ದು, ಅಡುಗೆ ತಯಾರಿಸಲು ಸಹ ತುಂಬ ತೊಂದರೆ ಪಡುತ್ತಿದ್ದೇವೆ. ವಿದ್ಯುತ್ ನೀಡುವಂತೆ ಸಂಬಂಧಪಟ್ಟವರನ್ನು ವಿಚಾರಿಸಿದರೆ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಇದರಿಂದ ತುಂಬ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಸೆಸ್ಕ್ ಎಇ ಆನಂದ್‌ಕುಮಾರ್ ಮಾತನಾಡಿ, ಓವರ್‌ಲೋಡ್ ಹಾಗೂ ಇಲಾಖೆಯ ಕೆಲವೊಂದು ನಿಯಮಗಳಿಂದಾಗಿ ವಿದ್ಯುತ್ ಸಮಸ್ಯೆಯಾಗುತ್ತಿದೆ. ಹೀಗಾಗಿ ರೈತರು ಸಹಕರಿಸುವಂತೆ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು ವಿದ್ಯುತ್ ನೀಡದಿದ್ದಲ್ಲಿ ರೈತ ಸಂಘಟನೆಯ ವತಿಯಿಂದ ಸೋಮವಾರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಹೊರನಡೆದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಚಂದ್ರಪ್ಪ, ಗುರುಮಲ್ಲಪ್ಪ, ಸೋಮಶೇಖರ್, ಬಸವಣ್ಣ, ಮಣಿ, ಕುಮಾರ್ ಹಾಗೂ ಇನ್ನಿತರರಿದ್ದರು.