ಜಿಲ್ಲೆ

ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ

ನರೇಗಲ್ಲ: ಸರಿಯಾದ ಸಮಯಕ್ಕೆ ಬಸ್​ಗಳು ಬರದಿರುವುದನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ಗುರುವಾರ ಸಮೀಪದ ಅಬ್ಬಿಗೇರಿಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಕೋವಿಡ್ ನಂತರ ಶಾಲೆ-ಕಾಲೇಜುಗಳು ಪ್ರಾರಂಭವಾಗಿವೆ. ಸರಿಯಾದ ಸಮಯಕ್ಕೆ ಬಸ್​ಗಳು ಬರದಿರುವುದರಿಂದ ತರಗತಿಗೆ ತೆರಳಲು ತೊಂದರೆಯಾಗುತ್ತಿದೆ. ಗ್ರಾಮದಿಂದ ನರೇಗಲ್ಲ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಬಸ್ ಇರುವುದಿಲ್ಲ. ಇದರಿಂದ ಸಂಚರಿಸುವ ಒಂದೆರೆಡು ಬಸ್​ಗಳಿಗೆ ಜೋತು ಬಿದ್ದು ಹೋಗುವ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರಯಾಣಿಕರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಸ್ ನಿರ್ವಾಹಕರು ರೋಣ ಘಟಕ ವ್ಯವಸ್ಥಾಪಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಬ್ಬಿಗೇರಿಯಿಂದ ನರೇಗಲ್ಲಗೆ ಹೋಗುವ ಬಸ್​ಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ನರೇಗಲ್ಲದಿಂದ ರೋಣಕ್ಕೆ ಹೋಗುತ್ತಿದ್ದ ಬಸ್ ತಡೆದು ಅಬ್ಬಿಗೇರಿಯಿಂದ ವಿದ್ಯಾರ್ಥಿಗಳಿಗಾಗಿ ನರೇಗಲ್ಲಗೆ ಬಿಡಲಾಯಿತು.

ಮಲ್ಲಪ್ಪ ಕಾಳಗಿ, ಶರಣಪ್ಪ ಗುಜಮಾಗಡಿ, ಪಾಂಡುರಂಗ ಲಿಂಗರೆಡ್ಡಿ, ಭೀಮಷಿ ಮಲ್ಲಾಪೂರ, ಶರಣು ಹುಳ್ಳಿ, ಬಸವರಾಜ ತಳವಾರ, ನೂರಾರು ವಿದ್ಯಾರ್ಥಿಗಳು ಇದ್ದರು.