ಜಿಲ್ಲೆ

ಸಮರ್ಪಕ ನೀರಾವರಿ ಸೌಕರ್ಯಕ್ಕೆ ಕ್ರಮ

ಹನೂರು: ಜಲಾಶಯದ ಮೂಲಕ ರೈತರ ಕೃಷಿಗೆ ಅನುಕೂಲವಾಗುವಂತೆ ಸಮರ್ಪಕ ನೀರಾವರಿ ಸೌಕರ್ಯವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.

ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿನ್ನತ್ತು ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶನಿವಾರ ಬಾಗಿನ ಅರ್ಪಿಸಿ ಮಾತನಾಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಳೆಯಾಗದ ಹಿನ್ನೆಲೆ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದವಲ್ಲದೇ, ಜಲಾಶಯಗಳಲ್ಲಿ ನೀರಿನ ಸಂಗ್ರಹಣಾ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಅಂತರ್ಜಲ ಮಟ್ಟ ಕುಸಿತಗೊಂಡು ಕೆಲವು ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿತ್ತು. ಜತೆಗೆ ಕೃಷಿಗೆ ಹಿನ್ನಡೆಯಾಗಿತ್ತು. ಇದರಿಂದ ತಾಲೂಕಿನಲ್ಲಿ ಬರದ ಛಾಯೆ ಆವರಿಸಿತ್ತು. ಆದರೆ ಈ ವರ್ಷ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಜಲಾಶಯಗಳು ಭರ್ತಿಯಾಗಿದ್ದರೆ, ಇನ್ನು ಕೆಲವು ಡ್ಯಾಂಗಳಲ್ಲಿ ನೀರಿನ ಸಂಗ್ರಹಣಾ ಪ್ರಮಾಣ ಹೆಚ್ಚಾಗಿದೆ. ಕೆರೆ ಕಟ್ಟೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿರುವುದು ಸಂತಸದ ವಿಚಾರ. ಇದರಿಂದ ಅಂತರ್ಜಲ ಮಟ್ಟ ಉತ್ತಮಗೊಂಡಿದ್ದು, ಕೃಷಿಗೆ ಅನುಕೂಲವಾಗಿದೆ. ಆದ್ದರಿಂದ ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಸಿ ಜಲಾಶಯದ ಮೂಲಕ ಕೃಷಿಗೆ ಅನುಕೂಲವಾಗುವಂತೆ ನೀರಾವರಿ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ತಾಪಂ ಇಒ ಉಮೇಶ್, ನೀರಾವರಿ ಇಲಾಖೆಯ ಎಇ ಪ್ರತಾಪ್, ಗ್ರಾಪಂ ಸದಸ್ಯರಾದ ಪಳನಿಸ್ವಾಮಿ, ಶಿವಣ್ಣ, ಮಾದೇಶ್, ಮುಖಂಡರಾದ ಮಹಾದೇವ, ರಾಜೇಂದ್ರ, ಅರುಳ್‌ಸ್ವಾಮಿ, ರಾಮು ಮತ್ತಿತರರಿದ್ದರು.