ಜಿಲ್ಲೆ

ಸಮರ್ಪಕ ಔಷಧ ವಿತರಣೆಗೆ ಆಗ್ರಹ

ಶಿರಹಟ್ಟಿ: ಪಟ್ಟಣದಲ್ಲಿನ ತಾಲೂಕು ಆಸ್ಪತ್ರೆಗೆ ಗ್ರಾಮೀಣ ಪ್ರದೇಶದಿಂದ ಬರುವ ರೋಗಿಗಳಿಗೆ ಸಮರ್ಪಕ ಔಷಧ ವಿತರಿಸಬೇಕು. ಹೊರಗುತ್ತಿಗೆ ಆಧಾರದಡಿ ನೇಮಿಸುವ ಕೆಲಸಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಬುಧವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ಇಲ್ಲಿನ ವೈದ್ಯರು ಸರ್ಕಾರದಿಂದ ಔಷಧ ಪೂರೈಕೆಯಾಗಿಲ್ಲ ಎಂಬ ಸಬೂಬು ಹೇಳಿ ಖಾಸಗಿ ಔಷ ಔಷಧ ಅಂಗಡಿಗಳಿಂದ ಔಷಧ ತರಲು ಚೀಟಿ ಕೊಡುತ್ತಾರೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದರು.

ಅಲ್ಲದೆ, ಹೊರಗುತ್ತಿಗೆ ಆಧಾರದಡಿ 21 ಜನ ಡಿ. ದರ್ಜೆ ನೌಕರರಾಗಿ ಸೇವೆ ಸಲ್ಲಿಸುವವರು ಬೇರೆ ಕಡೆಯವರಾಗಿದ್ದು ಅವರಿಗೆ ಕಳೆದ 7 ತಿಂಗಳಿಂದ ವೇತನ ನೀಡಿಲ್ಲ. ಬಾಕಿ ವೇತನ ಪಾವತಿಸುವುದರ ಜತೆಗೆ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದರು.

ಶಿರಸ್ತೇದಾರ ಜಿ.ಪಿ. ಪೂಜಾರ ಮನವಿ ಸ್ವೀಕರಿಸಿದರು. ದೇವೇಂದ್ರ ಶಿಂಧೆ, ಪ್ರಕಾಶ ಬಡೆಣ್ಣವರ, ನೂರ್ ಅಹ್ಮದ್ ಮುಳಗುಂದ, ಮಾಬುಸಾಬ್ ಢಾಲಾಯತ್, ಮಂಜುನಾಥ ಕುಂದರಗಿ, ಹರೀಶ ದೇಸಾಯಿಪಟ್ಟಿ, ಗೂಡುಸಾಬ ಚೋರಗಸ್ತಿ, ಚನ್ನವೀರ ನಡುವಿನಕೇರಿ. ಅಭಿಷೇಕ ಹಮ್ಮಿಗಿ, ಪೀರಸಾಬ ಒಂಟಿ ಇತರರು ಇದ್ದರು.