ಜಿಲ್ಲೆ

ಸಮರ್ಥ ನಾಯಕರ ಆಯ್ಕೆಗೆ ಮತದಾನ ಅವಶ್ಯಕ

ಕುಶಾಲನಗರ: ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಮತದಾನ ಅವಶ್ಯಕ. ಮತದಾನ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಂಡರೆ ಮಾತ್ರ ನಮ್ಮನ್ನು ಆಳುವ ಸೂಕ್ತ ನಾಯಕನ್ನು ಆಯ್ಕೆ ಮಾಡಲು ಸಾಧ್ಯ ಎಂದು ಕುಶಾಲನಗರ ಉಪ ಖಜಾನೆ ಅಧಿಕಾರಿ ಎಲ್.ಎಸ್.ವಿಜಯಕುಮಾರ್ ತಿಳಿಸಿದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮತದಾರರ ಜಾಗೃತಿ ಸಂಘದಿಂದ ಬುಧವಾರ ಆಯೋಜಿಸಿದ್ದ ರಾಜ್ಯಶಾಸ್ತ್ರ ಸಂಘ ಮತ್ತು ಮತದಾರರ ಸಂಘ ಉದ್ಘಾಟಿಸಿ ಮಾತನಾಡಿದರು. ನಾವು ಮತದಾನ ಮಾಡುವಾಗ ನಮ್ಮ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿದು ಮತದಾನ ಮಾಡಬೇಕು. ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಘೋಷಣೆ ಮಾಡುವ ಮೂಲಕ ಮತದಾನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಯುವಜನರು ಮತದಾನದಲ್ಲಿ ಭಾಗವಹಿಸುವುದಲ್ಲದೆ ಜಾಗೃತಿ ಮೂಡಿಸಬೇಕು ಎಂದರು.


ತಾಲೂಕು ಆರೋಗ್ಯಾಧಿಕಾರಿ ಎಚ್.ಕೆ.ಶಾಂತಿ ಮಾತನಾಡಿ, ಉತ್ತಮ ಸರ್ಕಾರ ಮತ್ತು ಉತ್ತಮ ನಾಯಕ ನಮಗೆ ಬೇಕಾದರೆ ನಾವೆಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.


ಪ್ರಾಂಶುಪಾಲ ಪ್ರೊ.ಬಿ.ಎಂ.ಪ್ರವೀಣ್ ಕುಮಾರ್ ಮಾತನಾಡಿ, ಪ್ರಥಮ ಬಾರಿಗೆ ಮತದಾನಲ್ಲಿ ಭಾಗವಹಿಸಲು ಅವಕಾಶ ಸಿಕ್ಕವರು ಅದನ್ನು ಜೋಪಾನವಾಗಿ ಚಲಾಯಿಸಬೇಕು. ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಚುನಾವಣೆ ಇದೆ ಎಂದರು.


ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎನ್.ವನಿತ್ ಕುಮಾರ್ ಮಾತನಾಡಿ, ಭಾರತ ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ರಾಷಟ್ರೆವಾಗಿದೆ. ಮತದಾನ ಮಾಡುವ ಮೂಲಕ ಇನ್ನಷ್ಟು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ತಿಳಿಸಿದರು.

ಕುಶಾಲನಗರ ತಾಲೂಕು ಕಚೇರಿ ಲೆಕ್ಕಾಧಿಕಾರಿ ರವಿ, ಉಪನ್ಯಾಸಕಿ ಜಯಂತಿ, ಹರ್ಷ, ಸುಧಾಕರ್, ಮಂಜು, ಜಯಲಕ್ಷ್ಮೀ ಇದ್ದರು.