ಜಿಲ್ಲೆ

ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ವಿಧಾನಸಭೆ ಉಪ ಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ ಅಜ್ಜಂಪೀರ ಖಾದ್ರಿ ಟಿಕೆಟ್ ಕೇಳಿದ್ದರು. ಒಂದು ಕ್ಷೇತ್ರದಲ್ಲಿ ಇಬ್ಬರಿಗೆ ಟಿಕೆಟ್ ಕೊಡಲು ಬರುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾಸೀರ್ ಖಾನ್ ಪಠಾಣ 68 ಸಾವಿರ ಮತ ಗಳಿಸಿದ್ದರು. ಹಾಗಾಗಿ ಅವರಿಗೆ ಟಿಕೆಟ್ ನೀಡಿದ್ದೇವೆ. ಅಜ್ಜಂಪೀರ ಖಾದ್ರಿ ಅವರೂ ಸಹ ಸಮರ್ಥ ಅಭ್ಯರ್ಥಿಯೇ ಆಗಿದ್ದರು. ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ 8 ಸಾವಿರ ಮತಗಳ ಲೀಡ್ ಬಂದಿತ್ತು. ಈ ಬಾರಿ ಸ್ಪರ್ಧೆಯೇ ಇಲ್ಲ ಎಂದು ಬಿಜೆಪಿ ಹೇಳುವುದಾದರೆ ನಮಗೆ ಹೆಚ್ಚು ಮತಗಳು ಹೇಗೆ ಬಂತು?. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ ರಾಗಿದ್ದಾರೆ. ನಮಗೆ ಬಿಜೆಪಿ ಎದುರಾಳಿಯೇ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್ ಯಾವಾಗಲೂ ಒಳಒಪ್ಪಂದದ ರಾಜಕಾರಣ ಮಾಡುವುದಿಲ್ಲ. ಅದು ಬಿಜೆಪಿನೇ ಮಾಡಿಕೊಂಡಿರಬಹುದು. ಅವರು ಸೋಲಲೆಂದೇ ಇಂತಹ ರಾಜಕಾರಣ ಮಾಡಿಕೊಳ್ಳುತ್ತಾರೆ. ಶಿಗ್ಗಾವಿಯಲ್ಲಿ ನಾವು ಗೆಲ್ಲುವ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ ಎಂದರು.