ಚಿಕ್ಕಪಡಸಲಗಿ: ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿ ಹಾಗೂ ಪಾಲಕರು ಚಿಕ್ಕಲಕಿ ಕ್ರಾಸ್‌ನಲ್ಲಿ ಮಂಗಳವಾರ ವಿಜಯಪುರ-ಧಾರವಾಡ ರಸ್ತೆ ತಡೆ ನಡೆಸಿದರು.
ಮೊದಲು ಸಾಕಷ್ಟು ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಈಗ ಆಗೊಂದು ಈಗೊಂದು ಬಸ್‌ಗಳು ಬರುವುದರಿಂದ ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೆ ಜಮಖಂಡಿಗೆ ತೆರಳಲು ತೀವ್ರ ತೊಂದರೆಯಾಗಿದೆ. ಈ ಕುರಿತು ಜಮಖಂಡಿ ಘಟಕದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಡಿಪೋ ಮ್ಯಾನೇಜರ್ ಬರಲು ಪಟ್ಟು: ಸ್ಥಳಕ್ಕೆ ಜಮಖಂಡಿ ಸಾರಿಗೆ ಘಟಕದ ವ್ಯವಸ್ಥಾಪಕರು ಆಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕೂಡಲೇ ಚಿಕ್ಕಲಕಿಕ್ರಾಸ್‌ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳನ್ನು ನಿಲುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಜಮಖಂಡಿ ಸಾರಿಗೆ ಘಟಕದ ಟ್ರಾಫಿಕ್ ಕಂಟ್ರೋಲರ ವಿಠ್ಠಲ ಕಾಂಬಳೆ ಮತ್ತು ಸಾವಳಗಿ ಪಿಎಸ್‌ಐ ಎನ್.ಎಲ್. ವಾಲಿಕಾರ, ಎಎಸ್‌ಐ ರಾಮಚಂದ್ರ ಕೋಳಿ ಆಗಮಿಸಿ ಸಮರ್ಪಕ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ಅಂದಾಜು 3 ಗಂಟೆಗಳವರೆಗೂ ಬಸ್ ಸಂಚಾರ ಬಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ಚಿಕ್ಕಲಕಿ, ಚಿಕ್ಕಲಕಿ ಕ್ರಾಸ್, ಬಿದರಿ, ಬಿದರಿ ಆರ್‌ಸಿ ಸೇರಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆಯಲ್ಲಿದ್ದರು.