ಹಾಸನ: ಜೀವನದಲ್ಲಿ ಏನು ಬೇಕಾದರೂ ಗಳಿಸಬಹುದು. ಆದರೆ ಸಮಯ ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸಿಕ್ಕಿರುವ ಸಮಯದಲ್ಲಿ ಉತ್ತಮವಾದ ಕೋರ್ಸ ಅನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾರ್ಥಕ ಬದುಕನ್ನು ರೂಪಿಸಿಕೊಳ್ಳಿ ಎಂದು ಹಾಸನ ಲೋಕಾಯುಕ್ತ ಸರ್ಕಲ್ ಇನ್ಸ್‌ಪೆಕ್ಟರ್ ಶಿಲ್ಪಾ ಮಂಜುನಾಥ್ ಹೇಳಿದರು.
ನಗರದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 2025-26 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಅಭಿವಿನ್ಯಾಸ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ತರಗತಿಗಳಲ್ಲಿ ಕಲಿಯುವ ಪಾಠವೊಂದೇ ಮುಖ್ಯವಲ್ಲ, ಅವು ನಾವು ಆರ್ಥಿಕವಾಗಿ ಸಬಲರಾಗಲು ಬೇಕಾಗಿರುವ ಒಂದು ಮಾರ್ಗ. ಅದಕ್ಕಿಂತಲೂ ಮುಖ್ಯವಾಗಿರುವುದು ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು. ನಮ್ಮ ನಾಗರಿಕತೆ ಮತ್ತು ಸುತ್ತಮುತ್ತಲಿನ ವಾತಾವರಣ ನಮ್ಮ ಬದುಕಿಗೆ ಪ್ರೇರಣೆಯಾಗುತ್ತವೆೆ ಎಂದರು.
ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್ ಮಾತನಾಡಿ, ಜೀವನದಲ್ಲಿ ನಾವು ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಆತುರದಿಂದ ತೆಗೆದುಕೊಂಡ ನಿರ್ಧಾರ ಮುಂದೆ ಪಶ್ಚಾತ್ತಾಪ ಪಡುವಂತಿರಬಾರದು. ಶಿಕ್ಷಣಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ನಮ್ಮಲ್ಲಿ ಜ್ಞಾನವಿದ್ದರೆ ಎಲ್ಲರೂ ಗೌರವಿಸುತ್ತಾರೆ. ಹಾಗಾಗಿ ಉತ್ತಮ ಜ್ಞಾನವನ್ನು ಪಡೆಯಲು ಶಿಕ್ಷಣ ಒಂದು ಶಕ್ತಿಯುತ ಮಾಧ್ಯಮ ಎಂದು ತಿಳಿಸಿದರು.
ಬೆಂಗಳೂರಿನ ಸಿರ್ಕಾನ ಕಂಪನಿಯ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಎ.ಎಸ್. ಮನು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಪ್ರೇರಕರಾಗಿರುತ್ತಾರೆ. ಆದ್ದರಿಂದ ಶಿಕ್ಷಕರನ್ನು ಗೌರವಿಸಿ. ಶಿಕ್ಷಣದ ಜತೆಗೆ ಉತ್ತಮ ಕೌಶಲಗಳನ್ನು ಬೆಳೆಸಿಕೊಳ್ಳಿ. ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು. ಏನೇ ಕಷ್ಟ ಬಂದರೂ ಕಲಿಯುವ ಛಲವಿದ್ದರೆ ನಿಮ್ಮ ಸಾಧನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ದೊಡ್ಡ ಕನಸು ಕಾಣಿ. ಏಕೆಂದರೆ ಪ್ರಪಂಚ ಅತೀ ವೇಗವಾಗಿ ಅಭಿವೃಧ್ಧಿಯಾಗುತ್ತಿದೆ. ನಿಮ್ಮ ಕನಸಿನ ಮೇಲೆ ಹೆಚ್ಚು ಕೇಂದ್ರೀಕೃತವಾಗಿ ಕಾರ್ಯಾರಂಭಿಸಿ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಆರ್. ಶಂಕರೇಗೌಡ ಮಾತನಾಡಿ, ಒಂದು ಹನಿ ನೀರು ಸರೋವರದಲ್ಲಿ ಬಿದ್ದರೆ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅದೇ ಹನಿ ತಾವರೆ ಎಲೆ ಮೇಲೆ ಬಿದ್ದರೆ ಅದು ಮುತ್ತಿನಂತೆ ಹೊಳೆಯುತ್ತದೆ. ಕಪ್ಪೆ ಚಿಪ್ಪಿನಲ್ಲಿ ಬಿದ್ದರೆ ಸ್ವಾತಿ ಮುತ್ತಾಗಿ ಪರಿವರ್ತನೆಯಾಗುತ್ತದೆ. ಎಲ್ಲಿ ನೀವು ಹೊಳೆಯುವ ಅವಕಾಶ ಸಿಗುತ್ತದೆಯೋ ಅಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ ಎಂದರು.
ನಮ್ಮ ಜೀವನದಲ್ಲಿ ಬದಲಾವಣೆ ಅತೀ ಮುಖ್ಯ. ಆ ಬದಲಾವಣೆ ಹೇಗಿರಬೇಕೆಂದರೆ, ಹುಟ್ಟು ಗುಡಿಸಿಲಿನಲ್ಲಾದರೂ ಸಾವು ಅರಮನೆಯಲ್ಲಾಗಬೇಕು. ನಾವು ಬಳಸುವ ನೀಲಿ ಅಥವಾ ಕಪ್ಪು ಇಂಕಿನ ಪೆನ್ನು ಹಸಿರು ಇಂಕಾಗಿ ಬದಲಾಗಬೇಕು, ನೀವು ಓದಿದ ಶಾಲೆಯಲ್ಲಿ ನಿಮ್ಮ ಸಾಧನೆಯನ್ನು ಕಂಡು ನಿಮ್ಮನ್ನು ಮೆಚ್ಚಿ ಗೌರವಿಸುವ ರೀತಿಯಲ್ಲಿ ಬದಲಾಗಬೇಕು. ನಿಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವ ರೀತಿಯಲ್ಲಿ ನೀವು ಬದಲಾಗಬೇಕು. ಅದನ್ನು ಧನಾತ್ಮಕ ಬದಲಾವಣೆ ಅಥವಾ ಸಾಧನೆ ಎಂದು ಕರೆಯುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.