ಜಿಲ್ಲೆ

ಸಮಯಪಾಲನೆ ಮರೆತ ಶಿಕ್ಷಕರು

ಅಶೋಕ್ ಕುಮಾರ್ ಎನ್

ಕುರುಗೋಡು: ತಾಲೂಕಿನ ಕಲ್ಲುಕಂಬ ಸರ್ಕಾರಿ ಪೌಢಶಾಲೆಯ ಶಿಕ್ಷಕರು ಸಮಯ ಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ಶಾಲೆಯಲ್ಲಿ ದಾಖಲಾತಿಗಾಗಿ ಬರುವ ವಿದ್ಯಾರ್ಥಿಗಳು ಮತ್ತು ಪಾಲಕರು ಶಾಲೆಯ ಕಾರ್ಯಾಲಯದ ಮುಂದೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪಾಲಕರೊಂದಿಗೆ ಆಗಮಿಸುತ್ತಿದ್ದಾರೆ. ಆದರೆ, ಬೆಳಗ್ಗೆ 11 ಗಂಟೆಯಾದರೂ ಒಂದಿಬ್ಬರು ಹೊರತುಪಡಿಸಿದರೆ ಉಳಿದ ಶಿಕ್ಷಕರು ಸೋಮವಾರ ಶಾಲೆಯತ್ತ ಸುಳಿಯಲಿಲ್ಲ. ಶಿಕ್ಷಕರ ಈ ನಡೆ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿರುವುದರಿಂದ ಪಕ್ಕದ ಶಾಲೆಯೊಂದಿಗೆ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಹೀಗಿದ್ದರೂ ಕಲ್ಲುಕಂಬ ಪ್ರೌಢಶಾಲೆಯ ಶಿಕ್ಷಕರು ಸಮಯಪಾಲನೆ ಮಾಡುತ್ತಿಲ್ಲ. ಮುಖ್ಯ ಶಿಕ್ಷಕ ಒಂದು ದಿನ ಶಾಲೆಗೆ ಬಂದರೆ ಆ ಬಳಕ ಒಂದು ವಾರವಾದರೂ ಬರುವುದಿಲ್ಲ. ಹೀಗಾಗಿಯೇ ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತವಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಾದ ಕೋರಿ ಹೇಮಂತ, ಮಘರಾಜ, ದತ್ತಣ್ಣ ಒತ್ತಾಯಿಸಿದ್ದಾರೆ.