ಜಿಲ್ಲೆ

ಸಮಯದ ಸದ್ಭಳಕೆಯಿಂದ ಸಾಧನೆ ಸುಲಭ

ಎ.ಎಸ್.ಮಣಿಕಂಠ

ಚಾಮರಾಜನಗರ: ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡರೆ ಸಾಧನೆ ಸುಲಭವಾಗುತ್ತದೆ ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಹಾಗೂ ತರಬೇತುದಾರ ಡಾ.ಶಿವಕುಮಾರ್ ಸಲಹೆ ನೀಡಿದರು.

ನಗರದ ಜೆ.ಎಚ್.ಪಾಟೀಲ್ ಸಭಾಂಗಣದಲ್ಲಿ ಭಾರತೀಯ ವಿಧ್ಯಾರ್ಥಿ ಸಂಘ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ, ಪಿಯುಸಿ ಮತ್ತು ಪದವಿ ಮುಗಿದ ನಂತರ ಮುಂದೆ ಏನಾಗಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಈ ಹಂತದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮವಾದ ನಿರ್ಧಾರವನ್ನು ಕೈಗೊಳ್ಳಬೇಕಾದದ್ದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಸಮಯವನ್ನು ಸದ್ಬಳಕೆ ಮಾಡಿಕೊಂಡು ಅಧ್ಯಯನ ಮಾಡಿದ್ದಲ್ಲಿ, ಮುಂದಿನ 60 ವರ್ಷ ನೆಮ್ಮದಿಯಿಂದ ಇರಬಹುದು. ಸಾಧಕರು ಸಮಯವನ್ನು ಸರಿಯಾಗಿ ಬಳಸಿಕೊಂಡು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಪ್ರೀತಿ, ಪ್ರೇಮದಿಂದ ದೂರ ಇರಬೇಕು. ಇಂಗ್ಲಿಷ್ ಚೆನ್ನಾಗಿ ಕಲಿಯುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಹಾಗೂ ವಕೀಲ ಎಸ್.ಉಮೇಶ್ ಮಾತನಾಡಿ, ಪಾಲಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಬೇರೆಯವರಿಗೆ ಮಾದರಿಯಾಗಿ ಉತ್ತಮವಾದ ಸ್ಥಾನಗಳನ್ನು ಅಲಂಕರಿಸಬೇಕು. ಮೊಬೈಲ್ ನಿಂದ ಅನುಕೂಲ ಮತ್ತು ಅನಾನುಕೂಲವನ್ನು ಅರಿತು ಬಳಕೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ನಗರಸಭೆ ಅಧ್ಯಕ್ಷ ಸುರೇಶ್, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಡಾ.ರೇಣುಕಾ ದೇವಿ, ಕಾರ್ಯಪಾಲಕ ಅಭಿಯಂತರ ಚಿಕ್ಕಲಿಂಗಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಮಂಜುನಾಥ ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಸ್ತ್ರೀ ರೋಗ ತಜ್ಞ ಡಾ.ನವೀನ್ ಚಂದ್ರ, ನಿವೃತ್ತ ಶುಶ್ರೂಷಾಧಿಕಾರಿ ಸಿ.ಎಸ್.ಉಷಾದೇವಿ, ಛಲವಾದಿ ಮಹಾಸಭಾ ಅಧ್ಯಕ್ಷ ಎನ್.ರಾಜೇಂದ್ರ, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‌ರಾಜ್, ಮುಖಂಡ ಕೆಲ್ಲಂಬಳ್ಳಿ ಶಿವು ಹಾಗೂ ಇತರರು ಹಾಜರಿದ್ದರು.