ಮಡಿಕೇರಿ : ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಸಮಯ ಪಾಲನೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಕಿವಿಮಾತು ಹೇಳಿದರು.
ಕೃಷಿಕ್ ಸರ್ವೋದಯ ಫೌಂಡೇಷನ್‌ನ ಮಡಿಕೇರಿ ಶಾಖೆ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗಳ ಮೂಲಕ ಗುರಿ ಸಾಧಿಸಲು ಮುಂದಾಗುವ ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಸಮಯಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಸತತ ಪರಿಶ್ರಮದಿಂದ ಶೈಕ್ಷಣಿಕ ಗುರಿ ಸಾಧಿಸಲು ಸಾಧ್ಯವಿದೆ. ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಉನ್ನತ ಹುದ್ದೆಯ ಕನಸಿನೊಂದಿಗೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಡಿಡಿಪಿಯು ಸಿ.ಪುಟ್ಟರಾಜು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎನ್‌ಇಇಟಿ ಮತ್ತು ಸಿಇಟಿ ತರಬೇತಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಸಲಹೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ ಮಾತನಾಡಿ, ಉಚಿತ ತರಬೇತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ತರಗತಿ ನಡೆಸಲು ಕೊಠಡಿ ನೀಡುವುದಾಗಿ ಹೇಳಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಬೆಂಗಳೂರಿನ ಕೊಡಗು, ದಕ್ಷಿಣ ಕನ್ನಡ ಗೌಡ ಸಮಾಜದ ಖಜಾಂಚಿ ಕುಂಭಗೌಡನ ಸೋಮಣ್ಣ, ಕೃಷಿಕ್ ಸರ್ವೋದಯ ಫೌಂಡೇಷನ್ ಅಧ್ಯಕ್ಷ ನಂಗಾರು ನಿಂಗರಾಜು, ಉಪಾಧ್ಯಕ್ಷ ಡಾ.ದಯಾನಂದ, ನಿರ್ದೇಶಕರುಗಳಾದ ಗುಲಾಬಿ ಜನಾರ್ಧನ, ಡಾ.ಕೋರನ ಸರಸ್ವತಿ, ಕುಂದಲ್ಪಾಡಿ ದಿವಾಕರ ಹಾಗೂ ನಂಗಾರು ರಾಮಚಂದ್ರ, ಪಾಣ್ತಲೆ ಪಳಂಗಪ್ಪ ಇದ್ದರು.
ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ: ಕೊಡಗು ಜಿಲ್ಲೆಯ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಎನ್‌ಇಇಟಿ ಮತ್ತು ಸಿಇಟಿ ತರಬೇತಿ ಆರಂಭಗೊಂಡಿದ್ದು, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನುರಿತ ಉಪನ್ಯಾಸಕರನ್ನು ನೇಮಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು 9448005642 ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಫೌಂಡೇಷನ್ ಖಜಾಂಚಿ ನವೀನ್ ಅಂಬೆಕಲ್ಲು ತಿಳಿಸಿದರು.