ಕುಶಾಲನಗರ: ಅಹಂ ಮನೋಭಾವ ಬದಿಗೊತ್ತಿ ಎಲ್ಲರೊಂದಿಗೆ ಸಮನ್ವಯತೆ ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದು ಕೂಡಿಗೆ ಡಯಟ್ನ ನಿವೃತ್ತ ಉಪ ನಿರ್ದೇಶಕ(ಅಭಿವೃದ್ಧಿ) ಮತ್ತು ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ ಹೇಳಿದರು.
ಕೂಡಿಗೆಯ ಡಯಟ್ನಲ್ಲಿ ಬುಧವಾರ ಡಯಟ್ ಸಂಸ್ಥೆಯ ಉಪನ್ಯಾಸಕ ವೃಂದ, ಸಿಬ್ಬಂದಿ, ಜಿಲ್ಲಾ ಹಾಗೂ ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಹಾಗೂ ತಾಲೂಕು ಸಹ ಶಿಕ್ಷಕರ ಸಂಘ ಮತ್ತು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೆಲಸ ಕಾರ್ಯಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಹನೆ, ತಾಳ್ಮೆ ಇರಬೇಕು. ಅಧಿಕಾರದಲ್ಲಿದ್ದಾಗ ತಮ್ಮ ಸಹೋದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣಬೇಕು. ಆಗ ಮಾತ್ರ ಉತ್ತಮ ವಾತಾವರಣ ಇರುತ್ತದೆ ಎಂದು ತಿಳಿಸಿದರು.
ಡಿಡಿಪಿಐ ಸಿ.ರಂಗಧಾಮಯ್ಯ ಮಾತನಾಡಿ, ಶಿಕ್ಷಣ ಇಲಾಖೆಯ ವಿವಿಧ ಸ್ಥರದ ಹುದ್ದೆಗಳಲ್ಲಿ ಅನ್ಯೋನ್ಯತೆಯಿಂದ ಕೆಲಸ ನಿರ್ವಹಿಸುವ ಮೂಲಕ ಇಲಾಖೆಯ ಪ್ರಗತಿಗೆ ಶ್ರಮಿಸಿರುವ ಮಲ್ಲೇಶಪ್ಪ ಅವರ ವೃತ್ತಿ ಜೀವನ ಎಲ್ಲರಿಗೂ ಮಾದರಿ ಎಂದರು.
ಇದೇ ವೇಳೆ ನಿವೃತ್ತಗೊಂಡ ಮಲ್ಲೇಶಪ್ಪ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಡಾ. ಬಿ.ಸಿ.ದೊಡ್ಡೇಗೌಡ, ಪ್ರಕಾಶ್, ಡಯಟ್ನ ಹಿರಿಯ ಉಪನ್ಯಾಸಕ ಶಿವಕುಮಾರ್, ಉಪನ್ಯಾಸಕ ಎಂ.ಕೃಷ್ಣಪ್ಪ, ಮುಖ್ಯ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್, ಸೋಮಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಬಿ.ಆರ್.ಸಿ ವನಜಾಕ್ಷಿ, ಹಿರಿಯ ಉಪನ್ಯಾಸಕರಾದ ನಿರುಪ್ ವೆಸ್ಲಿ, ಎಸ್.ಪಿ.ಮಹದೇವ್, ಅಲ್ಹುಸ್ನಾ, ಗಾಯಿತ್ರಿದೇವಿ ಸೇರಿದಂತೆ ಇತರರು ಇದ್ದರು.