ಜಿಲ್ಲೆ

ಸಮನ್ವಯತೆಯಿಂದ ಕರೊನಾ ನಿಯಂತ್ರಿಸಿ

ಲಕ್ಷ್ಮೇಶ್ವರ: ಕರೊನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ ಮತ್ತು ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಒಗ್ಗಟ್ಟು, ಸಮನ್ವಯತೆಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಕರೊನಾ ಸೋಂಕು ತಡೆಗಟ್ಟುವ ಕುರಿತು ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ದಿನೇದಿನೆ ಹೆಚ್ಚುತ್ತಿರುವ ಕರೊನಾ ಸೋಂಕಿತರೆಲ್ಲರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಕಷ್ಟವಾಗಬಹುದು. ಆದ್ದರಿಂದ ತಾಲೂಕು ಮಟ್ಟದಲ್ಲಿಯೇ ಚಿಕಿತ್ಸೆ ನೀಡಲು 30 ಬೆಡ್​ಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. 60 ವರ್ಷ ಮೇಲ್ಪಟ್ಟ, 10 ವರ್ಷದ ಒಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗುವುದು. ದೈಹಿಕವಾಗಿ ಸದೃಢವಾಗಿರುವ ಸೋಂಕಿತರನ್ನು ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಬೇಕು. 2-3 ದಿನದಲ್ಲಿ ವರವಿ ಹತ್ತಿರದ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸಿದ್ಧತೆಗಳನ್ನು ಮಾಡಿ ವರದಿ ಸಲ್ಲಿಸಬೇಕು. ಇನ್ನು ಬೇರೆ ಜಿಲ್ಲೆ, ರಾಜ್ಯದಿಂದ ಬಂದವರಿಗೆ, ಸೋಂಕಿತರ ಸಂಪರ್ಕ ಹೊಂದಿದವರಿಗೆ ಹೋಂ ಅಥವಾ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು. ಕ್ವಾರಂಟೈನ್ ಕೇಂದ್ರಗಳು ಜನವಸತಿ ಪ್ರದೇಶಗಳಿಂದ ಹೊರಗಿರಬೇಕು. ಉತ್ತಮ ಊಟ, ವಸತಿ ವ್ಯವಸ್ಥೆ ಇರಬೇಕು. ಅವ್ಯವಸ್ಥೆ ಬಗ್ಗೆ ವರದಿಯಾದರೆ ತಹಸೀಲ್ದಾರರನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಎಚ್ಚರಿಸಿದರು.

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಮಟ್ಟದ ಅಧಿಕಾರಿಗಳು ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕು. ಏನೇ ಸಮಸ್ಯೆ ಇದ್ದರೂ ಮತ್ತು ಸೌಲಭ್ಯ ಬೇಕಿದ್ದರೂ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಮತ್ತು ತಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದರು.

ತಾಲೂಕು ವೈದ್ಯಾಧಿಕಾರಿ ಸುಭಾಸ ದಾಯಗೊಂಡ ಮಾತನಾಡಿ, ಶಿರಹಟ್ಟಿ ಹಾಗೂ ಲಕ್ಷೆ್ಮೕಶ್ವರ ತಾಲೂಕುಗಳಲ್ಲಿ ಒಟ್ಟು 33 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಈಗಾಗಲೇ 17 ಜನರು ಗುಣವಾಗಿದ್ದಾರೆ. 16 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ಆಸ್ಪತ್ರೆಗಳಲ್ಲಿ ಕರೊನಾ ಲಕ್ಷಣಗಳಿರುವ ವ್ಯಕ್ತಿಗಳಿಗೆ ಬೇಕಾದ ಔಷಧಗಳು ಲಭ್ಯವಿವೆ. ತಾಲೂಕು ಮಟ್ಟದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರರಾದ ಭ್ರಮರಾಂಬ ಗುಬ್ಬಿಶೆಟ್ಟಿ, ಯಲ್ಲಪ್ಪ ಗೋಣೆಣ್ಣನವರ, ಡಿವೈಎಸ್​ಪಿ ಎಸ್.ಕೆ. ಪ್ರಲ್ಹಾದ, ಸಿಪಿಐ ವಿಕಾಸ ಪಿ.ಎಲ್, ತಾಪಂ ಇಒ ಎನ್.ಎಚ್. ಓಲೇಕಾರ, ಡಾ. ಚಂದ್ರು ಲಮಾಣಿ, ಪುರಸಭೆ ಮುಖ್ಯಾಧಿಕಾರಿಗಳಾದ ಆರ್.ಎಂ. ಪಾಟೀಲ, ಮಲ್ಲೇಶ ಎಂ, ಪಿಎಸ್​ಐಗಳಾದ ಶಿವಯೋಗಿ ಲೋಹಾರ ಇತರರು ಇದ್ದರು.

ಜನರ ಸಹಕಾರ ಅಗತ್ಯ: ಕರೊನಾ ವೈರಸ್ ಪ್ರಭಾವ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿ ಜತೆಗೆ ಜನರ ಸಹಕಾರ ಅತ್ಯಗತ್ಯವಾಗಿದೆ. ಪ್ರವಾಸ, ಮದುವೆ, ಮುಂಜಿವೆ, ಸಭೆ, ಸಮಾರಂಭಗಳನ್ನು ಮುಂದೂಡಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮಾರ್ಕೆಟ್​ನಲ್ಲಿ ಜನಸಂದಣಿ ಕಡಿಮೆಯಾಗಬೇಕು. ಅಕ್ಕಪಕ್ಕದ ಮನೆಗೆ ಅಂತರ ಜಿಲ್ಲೆ, ರಾಜ್ಯದಿಂದ ಯಾರಾದರೂ ಆಗಮಿಸಿದ್ದರೆ ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯಬೇಕು ಎಂದು ಸಚಿವ ಸಿ.ಸಿ. ಪಾಟೀಲ ಮನವಿ ಮಾಡಿದರು.