ಜಿಲ್ಲೆ

ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ

ಗದಗ: ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆ ಇರಲಿ, ಅಭಿವೃದ್ಧಿ ಕಾರ್ಯವಾಗಿರಲಿ ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಖ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಯ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಭವಿಸಿದ ಬರ, ಪ್ರವಾಹ, ಕೋವಿಡ್-19 ಸೋಂಕು ನಿರ್ವಹಣೆಯಲ್ಲಿ ಅಧಿಕಾರಿಗಳ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸಿದ್ದು, ಇಲ್ಲಿನ ಸೇವಾನುಭವ ಅಪಾರವಾಗಿದೆ. ಜಿಲ್ಲೆಯ ಜನತೆ ತೋರಿದ ಪ್ರೀತಿ, ಸಹಕಾರ, ಅಭಿಮಾನ ಮರೆಯಲಾರೆ ಎಂದರು.

ನೆರೆಯಿಂದಾಗಿ ಅನೇಕರು ಸೂರು ಕಳೆದುಕೊಂಡಿದ್ದ ವೇಳೆ ಸಂತ್ರಸ್ತರನ್ನು ಸಾಂತ್ವನ ಕೇಂದ್ರದಲ್ಲಿರಿಸಿ, ನಂತರದ ದಿನಗಳಲ್ಲಿ ಆಶ್ರಯ ಮನೆ ನಿರ್ವಿುಸಿ ಕೊಡಲು ಕ್ರಮಕೈಗೊಳ್ಳಲಾಯಿತು. ಕೇಂದ್ರ ಸರ್ಕಾರದ ಭೇಟಿ ಬಚಾವೋ ಭೇಟಿ ಪಡಾವೋ ಜನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿ ಜಾರಿಗೊಳಿಸಿ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲಿಯೇ ಗದಗ ಜಿಲ್ಲೆ ಪ್ರಶಸ್ತಿಗೆ ಭಾಜನವಾಗಿದ್ದು ಸಂತಸ ತಂದಿದೆ ಎಂದು ಹೇಳಿದರು.

ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸಿದ್ದು, ಕರೊನಾ ತಡೆಗಟ್ಟಲು ಜಿಲ್ಲೆಯ ಜನತೆ ಸಹಕಾರವೂ ಇದೆ. ಅಲ್ಲದೆ, ಲಾಕ್​ಡೌನ್ ಸಂದರ್ಭದಲ್ಲಿ ಅಂತರ್ ರಾಜ್ಯಗಳಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಜಿಲ್ಲೆಯ ಜನರನ್ನು ಕರೆತರಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಕೆ., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಡಿಎಫ್​ಒ ಸೂರ್ಯಸೇನ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಸಮಯಪ್ರಜ್ಞೆ, ಶಿಸ್ತು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳುವ ಗುಣ ಹೊಂದಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಬರ ನಿರ್ವಹಣೆ, ಪ್ರವಾಹ ಪರಿಸ್ಥಿತಿ, ಚುನಾವಣೆಗಳತಂಹ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರು.

ಜಿ.ಪಂ. ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಬದ್ಧ

ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸುಂದರೇಶ್ ಬಾಬು ಮಾತನಾಡಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಸಮಯಪ್ರಜ್ಞೆ, ಶಿಸ್ತು, ನಿರ್ಣಯ ತೆಗೆದುಕೊಳ್ಳುವ ರೀತಿ ಮೆಚ್ಚುವಂತದ್ದು. ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ಅಧಿಕಾರಿಗಳ ಸಹಕಾರದೊಂದಿಗೆ ಶ್ರಮಿಸಲು ನಾನು ಬದ್ಧವಾಗಿದ್ದೇನೆ ಎಂದರು.

EndFragment