ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ಭಯೋತ್ಪಾದನೆ, ಗಡಿ ವ್ಯಾಜ್ಯ ಮತ್ತಿತರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು, ಮಹಾನಗರಗಳಲ್ಲಿ
ಕಾನೂನು ಸುವ್ಯವಸ್ಥೆ ಬಲಪಡಿಸುವುದೂ ಸೇರಿ ಎಲ್ಲ ವಿವಿಧ ಪೊಲೀಸ್ ವಿಭಾಗದ ನಡುವೆ ಸಮನ್ವಯ ಸಾಧಿಸಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸ್ ಸಂಶೋಧನಾ ಮತ್ತು
ಅಭಿವೃದ್ಧಿ ಸಂಸ್ಥೆಯ ಕೇಂದ್ರ ಗುಪ್ತಚರ ತರಬೇತಿ ಶಾಲೆ ಮಹತ್ವದ
ಪಾತ್ರ ವಹಿಸಲಿದೆ ಎಂದು ಕೇಂದ್ರ ಗೃಹ ಹಾಗೂ
ಸಹಕಾರ ಸಚಿವ ಅಮಿತ್ ಷಾ ಹೇಳಿದರು.
ದೇವನಹಳ್ಳಿ ತಾಲೂಕು ಆವತಿ ಗ್ರಾಮದಲ್ಲಿ ಕೇಂದ್ರೀಯ ಪತ್ತೆದಾರಿ ತರಬೇತಿ (ಸಿಡಿಟಿಐ) ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗಡಿ ಸುರಕ್ಷಾ ದಳಗಳಲ್ಲಿ ಸೇವೆ ನೀಡುವ ಯೋಧರು ಕೇಂದ್ರ ಸ್ಥಾನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ವಸತಿ ಸೌಕರ್ಯ
ಹೆಚ್ಚಿಸಲಾಗುವುದು ಎಂದರು.
ಶುಭಾಶಯದೊಂದಿಗೆ ಭಾಷಣ: 2023ರ ಹೊಸ ವರ್ಷದ ಶುಭಾಶಯ ತಿಳಿಸುವುದರೊಂದಿಗೆ ಭಾಷಣ ಪ್ರಾರಂಭಿಸಿದ ಅಮಿತ್ ಷಾ, ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆ ಕಟ್ಟಡಕ್ಕೆ ರಾಜ್ಯ ಸರ್ಕಾರ ಉತ್ತಮ
ಪರಿಸರದಲ್ಲಿ ನಿವೇಶನ ಒದಗಿಸಿದೆ, ಮುಂಬರುವ ದಿನಗಳಲ್ಲಿ ಇದು ಪೊಲೀಸ್
ವ್ಯವಸ್ಥೆಗೆ ಸಾಕಷ್ಟು ಬಲನೀಡಲಿದೆ ಎಂದರು.
ಸಮಾಜ ಚಲನಶೀಲವಾಗಿರುತ್ತದೆ. ಅದರ ವಿಚಾರ, ಗಮನ, ಧೋರಣೆ, ಸ್ವರೂಪಗಳು ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಪೊಲೀಸ್ ವ್ಯವಸ್ಥೆಯೂ ಬದಲಾವಣೆ ಅಳವಡಿಸಿಕೊಳ್ಳದಿದ್ದರೆ ಅಸಮತೋಲನ
ಉಂಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಶೋಧನೆ ಆಧರಿಸಿ, ಸುರಕ್ಷತಾ ತಂತ್ರ, ರಣನೀತಿ ರೂಪಿಸಿಕೊಳ್ಳುವುದು ಮುಖ್ಯವಾಗಿದೆ, ವಿವಿಧ ಪೊಲೀಸ್ ವಿಭಾಗಗಳ ನಡುವೆ ಸಮನ್ವಯತೆ ತರುವುದು
ಮಹತ್ವಪೂರ್ಣ ಕಾರ್ಯವಾಗಿದೆ ಎಂದರು ಹೇಳಿದರು.
35 ಎಕರೆ ಭೂಮಿ ಮೀಸಲು: ಬ್ಯೂರೋ ಆ್ ಪೊಲೀಸ್ ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ (ಬಿಪಿಆರ್‌ಡಿ)ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಪತ್ತೆದಾರಿ ತರಬೇತಿ ಸಂಸ್ಥೆಯನ್ನು ಅರ್ಬನ್ ಪೊಲೀಸಿಂಗ್ ಹಾಗೂ ಬಾಕ್‌ಚೈನ್ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಸಿಪಿಒ ಹಾಗೂ ಸಿಎಪಿಎಫ್ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಅಧಿಕಾರಿಗಳ ತನಿಖಾ ಗುಣಮಟ್ಟ ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಆವತಿಯಲ್ಲಿ ಕೇಂದ್ರಕ್ಕಾಗಿ ರಾಜ್ಯ ಸರ್ಕಾರ 35 ಎಕರೆ ಭೂಮಿ ಒದಗಿಸಿದೆ.
ಸೈನಿಕರಿಗೆ ಇ-ಆವಾಸ್ ಪೋರ್ಟಲ್ :
ದೇಶದ ಗಡಿ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ಕುಟುಂಬಗಳೊಂದಿಗೆ ನೆಮ್ಮದಿ ಬದುಕು ನಡೆಸುವಂತಾಗಲು ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಿಸಲು ಮೋದಿ ಆದ್ಯತೆ ನೀಡಿದ್ದಾರೆ. ಇ-ಆವಾಸ್ ಪೋರ್ಟಲ್ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿವೆ ಎಂದು ಷಾ ಮಾಹಿತಿ ನೀಡಿದರು. ದೇಶದ ಗಡಿ ಸುರಕ್ಷಾ ದಳಗಳಲ್ಲಿಯೇ ಐಟಿಬಿಪಿ ಬಹಳ ದುರ್ಗಮ ಮತ್ತು ವಿಷಮ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಒಂದಿಂಚೂ ಅತಿಕ್ರಮಣವಾಗದಂತೆ ಕರ್ತವ್ಯ ನಿರ್ವಹಿಸುತ್ತಿದೆ, ಐಟಿಬಿಪಿ ಯೋಧರು ಭೀಮವೀರರಾಗಿದ್ದಾರೆ. ಆಯುಷ್ಮಾನ್ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದರು.
ಸವಾಲುಗಳಿಗೆ ಪರಿಹಾರ: ಹೆಚ್ಚಿದ ಭಯೋತ್ಪಾದನೆ, ಆತಂಕವಾದ, ಗಡಿ ವಿವಾದಗಳು ಹೊಸ ಸವಾಲು ಒಡ್ಡಿವೆ. ಬಿಪಿಆರ್ ಆ್ಯಂಡ್ ಡಿ ಇಂತಹ ಸವಾಲುಗಳಿಗೆ ಪರಿಹಾರ ಕಲ್ಪಿಸಲಿದೆ ಎಂದು ಷಾ ಹೇಳಿದರು. ಮಹಾನಗರಗಳಲ್ಲಿ ಬಹು ಭಾಷಿಕರು ನೆಲೆಸುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಅಲ್ಲಿನ ಪೊಲೀಸ್ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧನೆ, ಅಧ್ಯಯನಗಳ ಅಗತ್ಯ ಇದೆ ಎಂದರು. ಕೋಲ್ಕತ, ಹೈದರಾಬಾದ್, ರಾಜಸ್ಥಾನ ಮತ್ತಿತರ ಕಡೆಗಳಲ್ಲಿರುವ ಸಿಡಿಟಿಐ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿವೆ. ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಸಹಯೋಗದಲ್ಲಿನ ಅಧ್ಯಯನಗಳು ರಾಜ್ಯ ಹಾಗೂ ನೆರೆ ರಾಜ್ಯಗಳ ಪೊಲೀಸ್ ತನಿಖೆಗಳಿಗೆ ನೆರವಾಗಲಿವೆ. ಬಿಪಿಆರ್ ಮತ್ತು ಡಿ ಸಂಸ್ಥೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ವರ್ಚುವಲ್ ಉದ್ಘಾಟನೆ: ಭಾರತ ಟಿಬೇಟ್ ಗಡಿ ರಕ್ಷಣಾ ದಳ ಬೆಂಗಳೂರು ವಿಭಾಗದ ವಿವಿಧ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಷಾ ಉದ್ಘಾಟಿಸಿದರು. ಬೆಂಗಳೂರಿನ ಐಟಿಬಿಪಿ ಕಟ್ಟಡಗಳ ಸಮುಚ್ಛಯದಿಂದ ವರ್ಚುವಲ್ ಆಗಿ ಯೋಧರು ಮತ್ತು ಕುಟುಂಬದ ಸದಸ್ಯರು ಮಾತನಾಡಿ, ವಸತಿ ಸೌಕರ್ಯಗಳ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದರು.