ಚಿಂತಾಮಣಿ: ಆತ್ಮನು ಸರ್ವರಲ್ಲೂ ಸಮಾನವಾಗಿರುವುದರಿಂದ ಆತನನ್ನು ನೋಡುವುದೇ ಸಮದರ್ಶಿತ್ವ. ಸಮದರ್ಶಿತ್ವದ ಸಿದ್ಧಿಯೇ ವೇದಾರ್ಥ ಎಂದು ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ಗೌರಿಬಿದನೂರಿನ ಎಚ್.ಎನ್.ಕಲಾಭವನದಲ್ಲಿ ಕೈವಾರ ಶ್ರೀಯೋಗಿನಾರೇಯಣ ಮಠದಿಂದ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಾರ್ಥ ಅರಿತುಕೊಂಡ ಯೋಗಿಗೆ ಎಲ್ಲ ಚರಾಚರ ಜೀವಗಳಲ್ಲೂ ಪರಮಾತ್ಮನ ಅಂಶವೇ ಗೋಚರಿಸುವುದರಿಂದ ಭೇದವೆಣಿಸದೆ ಸಮದರ್ಶಿಯಾಗಿರುತ್ತಾನೆ. ದೇಹದಲ್ಲಿದ್ದರೂ ದೇಹದೊಡನೆ ಅಂಟಿಕೊಂಡಿರಬೇಕಾದ ಯಾವ ಸಂಬಂಧವೂ ಇಲ್ಲದಿರುವುದರಿಂದಲೇ ಜೀವಾತ್ಮನು ಅಂತ್ಯಕಾಲದಲ್ಲಿ ದೇಹ ತ್ಯಜಿಸಿ ಹೋಗುತ್ತಾನೆ. ಈ ಸತ್ಯ ಅರಿತುಕೊಂಡ ಜ್ಞಾನಿ ಎಲ್ಲರಲ್ಲಿಯೂ ಸಮಭಾವ ಕಾಣುತ್ತಾನೆ ಎಂದರು.
ಭಾರತದ ಸನಾತನ ಪರಂಪರೆ ಸಾಧು-ಸಂತರಿಗೆ ಮಹತ್ವದ ಸ್ಥಾನ ನೀಡಿದೆ. ಸನ್ಯಾಸತ್ವ ಬಹಳ ಶ್ರೇಷ್ಠವಾದುದು. ಕಾಯಾ, ವಾಚಾ, ಮನಸಾ ಧರ್ಮವನ್ನು ಪಾಲಿಸಬೇಕು. ರಾಮಾಯಣ, ಮಹಾಭಾರತ ಗ್ರಂಥಗಳು ಭಾರತೀಯರ ನರನಾಡಿಯಲ್ಲಿ ಮಿಳಿತವಾಗಿದೆ ಎಂದು ಹಿರಿಯ ಅಧ್ಯಾತ್ಮ ಚಿಂತಕ ಡಾ.ಬಾಬುಕೃಷ್ಣಮೂರ್ತಿ ಹೇಳಿದರು.
ಶ್ರೀಶಾರದಾ ಶಂಕರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಲಶಗಳನ್ನು ಹೊತ್ತ ಮಹಿಳೆಯರೊಂದಿಗೆ ನಾದಸ್ವರ, ಭಜನೆಯೊಂದಿಗೆ ದೇವಾಲಯದಿಂದ ವೇದಿಕೆ ವರೆಗೆ ಶೋಭಾಯಾತ್ರೆ ಮಾಡಲಾಯಿತು. ವಿದೂಷಿ ವಿಜಯಲಕ್ಷ್ಮೀ ತಂಡ ಮತ್ತು ಅನ್ನಮಯ್ಯ ಗಾನಯಜ್ಞ ತಂಡದ ಕಲಾವಿದರಿಂದ ಸಾಮೂಹಿಕ ಗಾಯನ ಹಾಗೂ ದಿಕ್ಸೂಚಿ ನಾಟ್ಯ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ತಾಪಂ ಅಧ್ಯಕ್ಷ ಲೋಕೇಶ್, ನಗರಸಭೆ ಸದಸ್ಯರಾದ ಕೆ.ಎಸ್.ಅನಂತರಾಜು, ರಮೇಶ್, ಮೋಹನ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟನಾರಾಯಣ್, ಸವಿತ ಸಮಾಜದ ಶಿವಕುಮಾರ್, ಕಸಾಪ ಮಾಜಿ ಅಧ್ಯಕ್ಷ ವೀರಣ್ಣ, ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮ್‌ಬಾಬು, ಉಪನ್ಯಾಸಕ ವೆಂಕಟರಮಣಪ್ಪ, ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಶಿಕ್ಷಕ ಪ್ರಕಾಶ್ ಇತರರಿದ್ದರು.