ಅರಸೀಕೆರೆ: ರೈಲ್ವೆ ಪ್ರಯಾಣಿಕರಿಗೆ ತೊಂದರೆ ಎದುರಾಗದಂತೆ ನೋಡಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ದೂರುಗಳು ಕೇಳಿ ಬಂದರೆ ಸಹಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ಅವರು ಅಮೃತ ಯೋಜನೆಯಡಿ ಕೈಗೊಂಡಿರುವ ಶೆಲ್ಟರ್, ಪಾರ್ಕಿಂಗ್, ಟಿಕೆಟ್ ಬುಕ್ಕಿಂಗ್ ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಲಸ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಗುತ್ತಿಗೆದಾರರು ನೀಡುವ ಸಮಜಾಯಿಷಿ ಕೇಳದೆ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವತ್ತ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದರು.
ಸಚಿವ ವಿ.ಸೋಮಣ್ಣ ಅವರು, ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಪಡೆದ ನಗರಸಭೆ ಸದಸ್ಯರಾದ ಅವಿನಾಶ್, ರೇವಣ್ಣ, ಇಮ್ರಾನ್ ಖಾನ್ ಸೇರಿದಂತೆ ಕಾಳನಕೊಪ್ಪಲು, ಸುಬ್ರಮಣ್ಯನಗರ ಹಾಗೂ ಮಲ್ಲೇಶ್ವರ ನಗರ ಬಡಾವಣೆಯ ನಿವಾಸಿಗಳು ದೌಡಾಯಿಸಿ ಕೆಲ ಸಮಸ್ಯೆಗಳನ್ನು ಗಮನಕ್ಕೆ ತಂದರು. ಮೇಲ್ಸೇತುವೆ ನಿರ್ಮಿಸಿ, ಗಿಡ ಗಂಟಿಗಳನ್ನು ತೆರವು ಮಾಡಿಸಿ, ಆಮೆ ವೇಗದಲ್ಲಿ ನಡೆಯುತ್ತಿರುವ ಕೆಲಸ ಪೂರ್ಣಗೊಳಿಸಿ ಎಂದು ಮನವಿ ಮಾಡಿದರು. ಎಲ್ಲವನ್ನೂ ಸಮಾಧಾನದಿಂದಲೇ ಆಲಿಸಿದ ವಿ.ಸೋಮಣ್ಣ, ಹಿಂದೆ ಯಾರಾದರೂ ಸಚಿವರು ನಿಲ್ದಾಣಕ್ಕೆ ಬಂದಿದ್ದರೆ ನೀವೇ ಹೇಳಿ. ಮನವಿ ಸ್ವೀಕರಿಸಿದ್ದು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಿದ್ದೇನೆ ಎಂದು ಸಮಾಧಾನಪಡಿಸಿದರು.
ಬಾಣಾವರ ಜಯಣ್ಣ, ಕಾಚಿಘಟ್ಟ ನವೀನ್,ಕಿರಣ್ ಮತ್ತಿತರರು ಬಾಣಾವರ ಜಾವಗಲ್ ನಡುವೆ ನಿರ್ಮಿಸಿರುವ ಕೆಳ ಸೇತುವೆ ಅತ್ಯಂತ ಕಿರಿದಾಗಿದ್ದು ಸರಣಿ ಅಪಘಾತಗಳಾಗುತ್ತಿವೆ. ಜನರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. ಸ್ಥಳ ಪರಿಶೀಲನೆ ನಡೆಸಿ ಸಮ್ಯಸ್ಯೆ ಇತ್ಯರ್ಥಪಡಿಸಿ ಎಂದು ಇಂಜಿನಿಯರ್ ಮುದಾಸಿರ್ ಅವರಿಗೆ ಸೂಚಿಸಿದರು.
ಕರವೇ ಸೇರಿದಂತೆ ಹಲವು ಸಂಘ, ಸಂಸ್ಥೆಗಳ ಮುಖಂಡರು ರೈಲ್ವೆ ನಿಲ್ದಾಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಮುಚ್ಚಿರುವ ರಸ್ತೆ ಗಳನ್ನು ತೆರವುಗೊಳಿಸಿ ಎಂದು ಲಿಖಿತ ಮನವಿ ಸಲ್ಲಿಸಿದರು.