19 ವೈಎಲ್‌ಡಿ ಚಿತ್ರ 02 ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಸುಗಂಧರಾಜ ಹೂವನ್ನು ಬೆಳೆದಿರುವುದು 
ಜಿಲ್ಲೆ

ಸಮಗ್ರ ಕೃಷಿ ‘ರವಿ’ಯ ಖುಷಿ

ಯಳಂದೂರು: ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಪಡೆಯಬಹುದು, ವ್ಯವಸ್ಥಿತ ಯೋಜನೆ ರೂಪಿಸಿಕೊಂಡರೆ ಲಭ್ಯವಿರುವ ಜಾಗದಲ್ಲಿ ಕೃಷಿ ಜತೆಗೆ ಕುರಿ ಸಾಕಣಿಕೆ ಮೂಲಕ ಯಶಸ್ಸು ಕಂಡುಕೊಳ್ಳಬಹುದು ಎಂಬುದನ್ನು ತಾಲೂಕಿನ ಗೌಡಹಳ್ಳಿ ಗ್ರಾಮದ ರೈತ ರವಿ ಸಮಿತಪಡಿಸಿ ಸಾಧಿಸಿ ತೋರಿಸಿದ್ದಾರೆ.!

ತಮ್ಮ ತಂದೆ-ತಾಯಿ, ಗ್ರಾಮದ ಬಹುತೇಕ ಜನರು ಕೃಷಿಯಲ್ಲಿ ತೊಡಗಿಕೊಂಡಿರುವುದರಿಂದ ಕೃಷಿಯನ್ನು ಪೂರ್ಣಕಾಲಿಕ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಬಾಳೆ, ಕಬ್ಬು, ಜೋಳ, ವಿವಿಧ ತರಕಾರಿ ಬೆಳೆಗಳು ಹಾಗೂ ಹೂವಿನ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಫಸಲು ಪಡೆದು ನೆಮ್ಮದಿ ಕಂಡುಕೊಂಡಿದ್ದಾರೆ.

ಇವರಿಗೆ ಇರುವ 5 ಎಕರೆ ಜಮೀನಿನಲ್ಲಿ ಕಬ್ಬು, ಬಾಳೆ, ಜೋಳ, ಭತ್ತ , ಈರುಳ್ಳಿ, ಹಾಗೂ ಹೂವಿನ ಬೆಳೆಯಾದ ಸುಗಂದರಾಜ, ಚೆಂಡು ಮಲ್ಲಿಗೆ, ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚು ಲಾಭಗಳಿಸುತ್ತಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂ. ಲಾಭವನ್ನು ಪಡೆಯುವ ಮೂಲಕ ಗ್ರಾಮದಲ್ಲಿ ಮಾದರಿ ರೈತರಾಗಿದ್ದಾರೆ.

ಕುರಿ ಸಾಕಣೆ ಪ್ರಾರಂಭ : ಕೃಷಿ ಜತೆಗೆ ಕುರಿ ಸಾಕಣೆ ಬಗ್ಗೆ ಪತ್ರಿಕೆ, ಮೊಬೈಲ್, ಯೂಟ್ಯೂಬ್‌ಗಳಲ್ಲಿ ಮಾಹಿತಿ ತಿಳಿದ ರವಿ,ಕುರಿ ಸಾಕಣೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ಮನೆಯ ಬಳಿಯಲ್ಲಿ 1.50 ಲಕ್ಷ ರೂ. ವೆಚ್ಚದಲ್ಲಿ ಕುರಿ ಘಟಕ ನಿರ್ಮಾಣ ಮಾಡಿ ಸ್ಥಳೀಯ ತಳಿಯ ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಜತೆಗೆ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಲ್ಲಿ ಕುರಿ ಘಟಕ ನಿರ್ಮಾಣಕ್ಕೆ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿದ್ದು, ಸಧ್ಯ 10 ಕುರಿಗಳಿವೆ.

ಸಹಕಾರ ಕ್ಷೇತ್ರದಲ್ಲೂ ಸಾಧನೆ : ಗೌಡಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಜಿಲ್ಲಾ ಸಹಕಾರ ಸಂಘದ ಯೂನಿಯಾನ್ ನಿರ್ದೇಶಕರಾಗಿ ಎರಡು ಬಾರಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಮೂಲಕ ರೈತರಿಗೆ ಸಹಕಾರ ಕ್ಷೇತ್ರದಿಂದ ದೊರೆಯುವ ಸಾಲ, ಗೊಬ್ಬರ, ಸೇರಿದಂತೆ ಇತರ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸಹಕಾರ ರಂಗದಲ್ಲೂ ಮುಂಚೂಣಿಯಾಗಿ ನಿಲ್ಲುವ ಮೂಲಕ ರಾಜಕೀಯ ಕ್ಷೇತ್ರದಲ್ಲೂ ಹೆಚ್ಚು ಪ್ರಗತಿ ಸಾಧಿಸುತ್ತಿದ್ದಾರೆ.

ಕಾಡು ಪ್ರಾಣಿಗಳ ಕಾಟ : ಬಿಆರ್‌ಟಿ ಸಮೀಪದಲ್ಲಿರುವ ಜಮೀನಿ ಕಾಡು ಪ್ರಾಣಿಗಳ ಕಾಟಕ್ಕೆ ಹೆಚ್ಚಾಗಿದೆ. ಇದರಿಂದ ದಿನನಿತ್ಯ ಬೆಳೆಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕಾಡಿನಲ್ಲಿ ಆಹಾರ, ನೀರಿಗಾಗಿ ಹಳ್ಳಿಗಳತ್ತ ಬಂದು ಹೋಗುತ್ತಿರುವ ಜಿಂಕೆ, ಆನೆ, ಕರಡಿ, ಬೆಳೆಗಳನ್ನು ನಾಶಪಡಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರ ಜತೆಗೆ ಮೊಲಗಳು, ಕಾಡುಹಂದಿ, ನವಿಲುಗಳು ಪ್ರತಿನಿತ್ಯ ಜಮೀನಿನಲ್ಲಿ ಬೆಳೆ ನಾಶ ಮಾಡುತ್ತಿದ್ದು, ಇವುಗಳಿಂದ ಬೆಳೆ ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ.

ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬೆಳೆ ಬೆಳೆದರೆ ಯಾವ ರೈತ ಕೂಡ ಸಂಕಷ್ಟಕ್ಕೆ ಸಿಲುಕುವುದಿಲ್ಲ. ಮಳೆ ಅಭಾವದಿಂದ ಒಂದು ವರ್ಷ ಬೆಳೆ ಕೈ ಕೊಡಬಹುದು, ಆದರೆ ಪ್ರತಿ ವರ್ಷ ಹಾಗೆಯೇ ಆಗುವುದಿಲ್ಲ. ಶ್ರಮವಹಿಸಿ ದುಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಮ್ಮ ರೈತರು ಒಂದೇ ಬೆಳೆಗೆ ಒಗ್ಗಿಕೊಳ್ಳದೆ ಮಿಶ್ರ ಬೇಸಾಯಕ್ಕೆ ಒತ್ತು ಕೊಡಬೇಕು.ಆಗ ಒಂದು ಬೆಳೆ ಕೈ ಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಜತೆಗೆ ಕುರಿ ಸಾಕಣೆ ಮಾಡಿದರೆ ಹೆಚ್ಚು ಲಾಭಪಡೆಯಬಹುದು.
> ಎಂ.ರವಿ

ರೈತ ಗೌಡಹಳ್ಳಿ ಗ್ರಾಮ

19 ವೈಎಲ್‌ಡಿ ಚಿತ್ರ 02 ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಸುಗಂಧರಾಜ ಹೂವನ್ನು ಬೆಳೆದಿರುವುದು
19 ವೈಎಲ್‌ಡಿ ಚಿತ್ರ 03 ಯಳಂದೂರು ತಾಲೂಕಿನ ಗೌಡಹಳ್ಳಿ ರೈತ ರವಿ ಮನೆಯ ಬಳಿ ಕುರಿ ಸಾಕಾಣಿಕೆ ಮಾಡುತ್ತಿರುವುದು
19 ವೈಎಲ್‌ಡಿ ಚಿತ್ರ 04 ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಚೆಂಡು ಮಲ್ಲಿಗೆ ಹೂವಿನ್ನು ಸಸಿಯನ್ನು ನಾಟಿ ಮಾಡಿರುವುದು