ಹುಣಸೂರು: ಶಾಲೆಯಲ್ಲಿ ಆಯೋಜಿಸಿದ್ದ ಪ್ರಕೃತಿ ನಡಿಗೆ ಚಟುವಟಿಕೆಯ ಅಂಗವಾಗಿ ಪ್ರಗತಿಪರ ರೈತರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ವಿದ್ಯಾರ್ಥಿಗಳು, ಕೃಷಿಯಲ್ಲಿನ ವೈವಿಧ್ಯತೆ, ಆಧುನಿಕತೆ ಮತ್ತು ವಿಜ್ಞಾನವನ್ನು ಆಸಕ್ತಿಯಿಂದ ಆಲಿಸಿದ ಪುಟಾಣಿಗಳು...
ತಾಲೂಕಿನ ಬಿಳಿಕೆರೆ ಹೋಬಳಿ ದೇವಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಸೋಮವಾರ ತಮ್ಮದೇ ಗ್ರಾಮದ ಪ್ರಗತಿಪರ ರೈತ ವೀರರಾಜ ಅರಸ್ ಅವರ ತೋಟಕ್ಕೆ ಭೇಟಿ ನೀಡಿದ್ದರು. ಡಿಸೆಂಬರ್‌ನಲ್ಲಿ ‘ವಿಜಯವಾಣಿ’ ಪತ್ರಿಕೆಯ ನೇಗಿಲಯೋಗಿ ವಿಭಾಗದಲ್ಲಿ ಪ್ರಕಟಗೊಂಡಿದ್ದ ಪ್ರಗತಿಪರ ರೈತರ ಕುರಿತಾದ ವಿಶೇಷ ವರದಿಯನ್ನು ಗಮನಿಸಿದ್ದ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ವರದಿಯಿಂದ ಪ್ರೇರಿತಗೊಂಡು ಮಕ್ಕಳಿಗೆ ಪ್ರಕೃತಿ ನಡಿಗೆ ಚಟುವಟಿಕೆಯಡಿ ರೈತರ ಬಳಿ ಕರೆದೊಯ್ಯಲು ನಿರ್ಧರಿಸಿದ್ದರು.
ಪ್ರಗತಿಪರ ರೈತ ವೀರರಾಜ ಅರಸ್ ಮಕ್ಕಳನ್ನು ತೋಟಕ್ಕೆ ಕರೆದೊಯ್ದು ತಾವು ಕೈಗೊಂಡ ಕೃಷಿ ಕುರಿತು ಮಾಹಿತಿ ನೀಡಿದರು. ಜೀವಾಮೃತ ತಯಾರಿಸುವುದು ಹೇಗೆ? ಸಮಗ್ರ ಕೃಷಿಯ ಲಾಭ, ಕಾಫಿ ಬೆಳೆಯದ ನಾಡಲ್ಲಿ ಕಾಫಿ ಬೆಳೆದದ್ದು, ಕೋಳಿಹಿಕ್ಕೆಯ ಗೊಬ್ಬರವನ್ನು ಸದ್ಬಳಕೆ ಮಾಡಿಕೊಳ್ಳುವುದು, ವಿವಿಧ ಬಗೆಯ ಅಪರೂಪದ ಹಣ್ಣುಗಳು, ಅಡಕೆ ಬೆಳೆಯ ವಿಧಗಳು, ಸಾಂಬಾರ ಪದಾರ್ಥಗಳ ಕೃಷಿ, ಹನಿ ನೀರಾವರಿ, ಊಟಿ ಸೇಬು, ಕಿತ್ತಳೆ ಹಣ್ಣುಗಳು ಹೀಗೆ ವೈವಿಧ್ಯಮಯ ಕೃಷಿ ಪರಿಚಯ ಮಾಡಿಸಿಕೊಟ್ಟರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಹಣ್ಣು ಹಂಪಲು ನೀಡಿ ಬೀಳ್ಕೊಟ್ಟರು.
ಮುಖ್ಯಶಿಕ್ಷಕಿ ಶಶಿಕಲಾ, ಸಹ ಶಿಕ್ಷಕರಾದ ಆರ್.ಪ್ರದೀಪ್, ಕೀರ್ತನಾ, ಮಂಗಳಾ, ಅಡುಗೆ ಸಿಬ್ಬಂದಿ ಮುತ್ತುಲಕ್ಷ್ಮೀ, ಸಂಗೀತಾ ಇದ್ದರು.