ಆಡುಗಳೊಂದಿಗೆ ಕೃಷಿಕ ಮೊಹಮದ್ ಹನೀಫ್. 
ಜಿಲ್ಲೆ

ಸಮಗ್ರ ಕೃಷಿ ತಂದುಕೊಟ್ಟ ಲಾಭ

ವಿರಾಜಪೇಟೆ: ಕೃಷಿ ಎನ್ನುವುದು ಪ್ರಯೋಗವಿದ್ದಂತೆ. ಇದನ್ನು ನಂಬಿದವರು ಎಂದಿಗೂ ನಷ್ಟ ಅನುಭವಿಸಲು ಸಾಧ್ಯವಿಲ್ಲ. ಒಂದು ಬೆಳೆ ಕೈ ಹಿಡಿಯಲಿಲ್ಲ ಎಂದು ಕೊರಗುವ ಬದಲು ಸಮಗ್ರ ಕೃಷಿ ಮಾಡಿದರೆ ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತದೆ ಎನ್ನುವುದು ಪ್ರಸ್ತುತ ಸಾಕಷ್ಟು ಸಂದರ್ಭದಲ್ಲಿ ರುಜುವಾತಾಗಿದೆ.

ಇದಕ್ಕೆ ಪೂರಕವೆಂಬಂತೆ ತಾಲೂಕಿನ ಮೈತಾಡಿ ಬಳಿಯ ಚಾಮೀಯಾಲ ಗ್ರಾಮದ ಕೆ.ಎಚ್.ಮೊಹಮ್ಮದ್ ಹನೀಫ್ ಮತ್ತು ಸಮೀನಾ ದಂಪತಿ ಸಮಗ್ರ ಕೃಷಿ ಸೂತ್ರ ಅಳವಡಿಸಿಕೊಂಡು ಆರಾಮದಾಯಕ ಜೀವನ ಸಾಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹನೀಫ್ ಅವರ ತಂದೆ ಕೆ.ಬಿ ಹಸನ್ ಮೂಲತಃ ಕೃಷಿಕರು. ತಂದೆಯಿಂದ ಮಗನಿಗೆ ಎರಡೂವರೆ ಎಕರೆ ಜಮೀನು ಬಳುವಳಿಯಾಗಿ ಬಂದಿತ್ತು. ಪ್ರಸ್ತುತ ಇವರ ಬಳಿ ಹತ್ತು ಎಕರೆ ತೋಟ, ಎರಡು ಎಕರೆ ಗದ್ದೆಯಿದೆ. ಈ ಪೈಕಿ ಆರು ಎಕರೆ ತೋಟದಲ್ಲಿ ಕಾಫಿ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸುಮಾರು 27 ಎಕರೆಯಷ್ಟು ಕಾಫಿತೋಟ ಹಾಗೂ ಆರು ಎಕರೆಯಷ್ಟು ಗದ್ದೆಯನ್ನು ಇಪ್ಪತ್ತು ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದು ತಮ್ಮ ಕೃಷಿ ಕಾರ್ಯವನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಂಡಿದ್ದಾರೆ.

ಕಾಫಿ ತೋಟದಲ್ಲಿ ಬಂಪರ್ ಬೆಳೆ: ಸುಮಾರು ಮೂವತ್ತು ವರ್ಷದ ಹಳೆಯ ರೋಬಸ್ಟಾ ಕಾಫಿಗಿಡಗಳು ಇವರ ಪಾಲಿಗೆ ವರವಾಗಿದೆ. ಎಕರೆಗೆ 56 ಚೀಲ ಕಾಫಿ ಸಿಗುತ್ತಿದ್ದು, ಉಳಿದಂತೆ 30-40 ಚೀಲ ಕಾಫಿ ಸಿಗುತ್ತದೆ. ಇದರೊಂದಿಗೆ ಆರೇಳು ಹಸು ಸಾಕಿಕೊಂಡಿರುವ ಹನೀಫ್ ಮೀನಿನ ತ್ಯಾಜ್ಯ, ಗ್ಲಿರಿಸೀಡಿಯಾ ಸೊಪ್ಪು, ಬಾಳೆದಿಂಡು ಇತ್ಯಾದಿಯನ್ನು ಸಗಣಿಯೊಂದಿಗೆ ಬೆರೆಸಿ ಸಾವಯವ ಗೊಬ್ಬರ ತಯಾರಿಸಿಕೊಂಡು ಪ್ರತಿವರ್ಷ ಕಾಫಿಗಿಡಕ್ಕೆ ಕೊಡುತ್ತಾರೆ.

ಹಣ್ಣುಗಳ ತೋಟ: ಕಾಫಿ ತೋಟದಲ್ಲಿ ಹಣ್ಣಿನ ಮರಗಳು ಕಣ್ಣಿಗೆ ರಾಚುತ್ತದೆ. ಬೆಣ್ಣೆ ಹಣ್ಣು, ಹೂಬಾಳೆ, ಕಲ್ಲುಬಾಳೆ, ನೇಂದ್ರಬಾಳೆ, ಬೂದು ಬಾಳೆ, ಚೀನಾ ಬಾಳೆ ಸೇರಿದಂತೆ ಹದಿನಾಲ್ಕು ಬಗೆಯ ಬಾಳೆಗಿಡಗಳನ್ನು ಬೆಳೆದಿದ್ದಾರೆ. ವಾರಕ್ಕೆ ಹದಿನೈದರಿಂದ ಇಪ್ಪತ್ತು ಗೊನೆ ಮಾರುತ್ತಾರೆ. ಬೆಣ್ಣೆಹಣ್ಣು ವರ್ಷಕ್ಕೆ ಸುಮಾರು ಐದರಿಂದ ಆರು ಕ್ವಿಂಟಾಲ್ ಕೆಜಿಗೆ 80 ರೂ.ನಂತೆ ಇಲ್ಲೇ ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಡ್ರಾಗನ್ ಹಣ್ಣು, ರಾಂಬೂಟನ್ ಹಣ್ಣು, ಲೀಚಿ ಹಣ್ಣುಗಳು ಸಣ್ಣ ಪ್ರಮಾಣದಲ್ಲಿ ಆದಾಯ ತಂದುಕೊಡುತ್ತಿವೆ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿಯೂ ಐದಾರು ಬಗೆಗಳಿದ್ದು ಮಾವು ಅಷ್ಟೊಂದು ಲಾಭದಾಯಕವಾಗಿಲ್ಲದಿದ್ದರೂ ಸಿಕ್ಕಷ್ಟು ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ.

ಕೈಹಿಡಿದಿದೆ ಕಾಳು ಮೆಣಸು: ಕಾಳುಮೆಣಸಿನ ಪಣಿಯೂರು-1 ರಿಂದ 8, ಹರಬಳ್ಳಿ, ಅರ್ಕಾಕೂರ್ಗ್, ಎಕ್ಸೆಲ್, ಕರಿಮುಂಡ ಇತ್ಯಾದಿ ತಳಿಯ ಬಳ್ಳಿಗಳು ತೋಟದಲ್ಲಿವೆ. 2021ರಲ್ಲಿ ಆರು ಎಕರೆ ತೋಟದಲ್ಲಿ 22 ಕ್ವಿಂಟಾಲ್ ಕಾಳುಮೆಣಸು ಕೊಯ್ದಿದ್ದರು.

ಅಡಕೆ-ತೆಂಗಿನಿಂದಲೂ ಲಾಭ: ತೋಟದಲ್ಲಿ ಸುಮಾರು 2000 ಅಡಕೆ ಮರಗಳಿವೆ. ಸ್ವತಃ ಹನೀಫ್ ಅವರೇ ಅಡಕೆ ಮರಗಳಿಗೆ ಔಷಧ ನೀಡುತ್ತಾರೆ. ಜತೆಗೆ ಆಡು, ಕೋಳಿ ಗೊಬ್ಬರವನ್ನೂ ಪೋಷಿಸುತ್ತಾರೆ. ಪ್ರತಿವರ್ಷ 30 ರಿಂದ 36 ಕ್ವಿಂಟಾಲ್ ಅಡಕೆ ಮಾರುತ್ತಾರೆ. ಎರಡು ತಿಂಗಳಿಗೊಮ್ಮೆ 300 ರಿಂದ 350 ತೆಂಗಿನಕಾಯಿ ಮಾರಾಟ ಮಾಡುತ್ತಾರೆ. ಹನೀಫ್ ಅವರ ಪತ್ನಿ ಮನೆಯಲ್ಲೇ ಕೊಬ್ಬರಿ ಎಣ್ಣೆ ಮಾಡಿ ಮಾರಾಟ ಮಾಡುತ್ತಾರೆ.

ಅತಿರಾ, ದೊಡ್ಡ, ಚಿಂಗ್ರಿ ಎನ್ನುವ ಮೂರು ಹಳೆಯ ಕಾಲದ ಭತ್ತದ ತಳಿಗಳನ್ನು ಇವರು ಬೆಳೆಯುತ್ತಾರೆ. ತುಪ್ಪದ ಅನ್ನ ಮಾಡಲು ಬಳಸುತ್ತಿದ್ದ ಸುವಾಸನೆಭರಿತ ಚಿಂಗ್ರಿ ಅಕ್ಕಿ, ಕುಸಲಕ್ಕಿಗೆ ಅತಿರಾ, ಅತಿರಾವನ್ನೂ ಬೆಳೆಯುತ್ತಾರೆ. ಅಲ್ಲದೆ ಒಣಹುಲ್ಲಿನಿಂದ ಉತ್ತಮ ಆದಾಯ ಬರುತ್ತಿದೆ.
ಕಾಫಿ ತೋಟಕ್ಕೆ ನೀರು ಹಾಯಿಸಲು ಕೊಳ ಇದ್ದು ಅದರಲ್ಲೇ ಮೀನು ಸಾಕಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮೀನು ಮಾರಾಟ ಮಾಡಿ ಅದರಲ್ಲಿಯೂ ಲಾಭ ಕಾಣುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಆಡು ಸಾಕಣೆ ಮಾಡುತ್ತಿರುವ ಇವರು, ಮಲಬಾರಿ ಮತ್ತು ಬೋಯರ್ ತಳಿಯ ಆಡುಗಳನ್ನು ಮಾರಾಟ ಮಾಡುತ್ತಾರೆ.
ಸುಮಾರು ನೂರವೈತ್ತು ನಾಟಿಕೋಳಿಗಳನ್ನು ಸಾಕಿ ಒಂದು ಮೊಟ್ಟೆಗೆ ಹತ್ತು ರೂ.ನಂತೆ ಮಾರುತ್ತಾರೆ. ಇದರೊಂದಿಗೆ ಹೈನೋದ್ಯಮವನ್ನೂ ಮಾಡುತ್ತಿದ್ದು, ದಿನಕ್ಕೆ ಮೂವತ್ತು ಲೀಟರ್ ಹಾಲು ಸಿಗುತ್ತದೆ. ಲೀಟರ್‌ಗೆ ನಲವತ್ತು ರೂ.ನಂತೆ ಹಾಲು ಮಾರುತ್ತಿದ್ದಾರೆ. ಕೆಲಸಗಾರರ ಜತೆಗೆ ಸೇರಿ ನಾವೂ ಶ್ರದ್ಧೆಯಿಂದ ದುಡಿಯುವುದೇ ಕೃಷಿಯ ಯಶಸ್ಸಿಗೆ ಕಾರಣ ಎನ್ನತ್ತಾರೆ ಹನೀಫ್.

ಪಾಲಕರು ಕೃಷಿಕರಾಗಿದ್ದನ್ನು ಕಂಡು ನನಗೂ ಕೃಷಿಯ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ತಂದೆ ಕಾಫಿ, ಮತ್ತು ಭತ್ತವನ್ನು ಮಾತ್ರ ಬೆಳೆಯುತ್ತಿದ್ದ್ದರು. ಅದರಿಂದ ಇಂದಿಗೂ ಲಾಭ ಗಳಿಸಿದ್ದನ್ನು ಕಂಡಿರಲಿಲ್ಲ. ಪ್ರಸ್ತುತ ನಾನು ಸಮಗ್ರ ಕೃಷಿ ಮಾಡುತ್ತಿರುವುದರಿಂದ ಒಂದು ಬೆಳೆಯಿಂದ ನಷ್ಟ ಉಂಟಾದರೂ ಮತ್ತೊಂದು ಬೆಳೆ ಅದನ್ನು ಸರಿದೂಗಿಸುತ್ತದೆ. ಕೃಷಿಕರು ಅರೆಬರೆ ಕೃಷಿ ಮಾಡಿದರೆ ಸಾಲದು. ಬದಲಾಗಿ ಬೆಳೆದ ಬೆಳೆಯನ್ನು ಮಾರಲು ಒಳ್ಳೆಯ ಮಾರುಕಟ್ಟೆ ಕಂಡುಹಿಡಿದುಕೊಳ್ಳಬೇಕು.
ಕೆ.ಎಚ್.ಮೊಹಮದ್ ಹನೀಫ್, ಸಮಗ್ರ ಕೃಷಿಕ, ಮೈತಾಡಿ ಚಾಮೀಯಾಲ ಗ್ರಾಮ.